ಬಾಲಿವುಡ್ ನಟ ಗೋವಿಂದ ಅವರಿಗೆ ಮಂಗಳವಾರ (ಅಕ್ಟೋಬರ್ 1) ನಿಜಕ್ಕೂ ಬ್ಯಾಡ್ ಡೇ. ಬೆಳ್ಳಂಬೆಳಗ್ಗೆ ಅವರ ಬಗ್ಗೆ ಕಹಿ ಸುದ್ದಿ ಕೇಳಿಬಂತು. ತಮ್ಮದೇ ಪಿಸ್ತೂಲ್ನಿಂದ ಅವರು ಗುಂಡು ಹಾರಿಸಿಕೊಂಡರು. ಆಕಸ್ಮಿಕವಾಗಿ ಫೈರ್ ಆಗಿದ್ದರಿಂದ ಅವರ ಕಾಲಿಗೆ ತೀವ್ರ ಗಾಯ ಆಯಿತು. ನಂತರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗೋವಿಂದ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ನಟನಿಗೆ 8ರಿಂದ 10 ಹೊಲಿಗೆ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
‘ಗೋವಿಂದ ಅವರಿಗೆ 8ರಿಂದ 10 ಹೊಲಿಗೆ ಹಾಕಿದ್ದೇವೆ. ಇನ್ನು ಎರಡು-ಮೂರು ದಿನದಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಮೊಣಕಾಲಿನಿಂದ ಎರಡು ಇಂಚು ಕೆಳಗಿನ ಜಾಗದಲ್ಲಿ ಅವರಿಗೆ ಗುಂಡೇಟು ಆಗಿದೆ’ ಎಂದು ಮುಂಬೈನ ಖಾಸಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತಮ್ಮ ಭದ್ರತೆಗಾಗಿ ಇಟ್ಟುಕೊಂಡಿದ್ದ ರಿವೋಲ್ವಾರ್ ಆಕಸ್ಮಿಕವಾಗಿ ಫೈರ್ ಆದ ಪರಿಣಾಮದಿಂದ ಗೋವಿಂದ ಅವರಿಗೆ ಗುಂಡೇಟು ತಗುಲಿತ್ತು.
ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಗೋವಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಗೋವಿಂದ ಸಹೋದರ ಕೀರ್ತಿ ಕುಮಾರ್, ಮಗಳು ಟೀನಾ ಅಹುಜಾ ಮುಂತಾದವರು ಆಸ್ಪತ್ರೆಗೆ ಬಂದಿದ್ದಾರೆ. ಗೋವಿಂದ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳಿಗೆ ಸಮಾಧಾನ ಆಗಿದೆ. ಸ್ವಲ್ಪದರಲ್ಲೇ ದೊಡ್ಡ ಅಪಾಯ ತಪ್ಪಿತು ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ನಾನು ಟಾಯ್ಲೆಟ್ ಕ್ಲೀನ್ ಮಾಡಬೇಕಾ? ಸ್ಟಾರ್ ನಟನ ಪತ್ನಿಯ ತಿರುಗೇಟು
‘ಅಭಿಮಾನಿಗಳು, ದೇವರು ಮತ್ತು ನನ್ನ ತಂದೆ-ತಾಯಿ ಆಶೀರ್ವಾದದಿಂದ ನಾನು ಗುಣಮುಖನಾಗುತ್ತಿದ್ದೇನೆ. ನನಗೆ ಗುಂಡೇಟು ಆಗಿತ್ತು. ಈಗ ಬುಲೆಟ್ ತೆಗೆಯಲಾಗಿದೆ. ಇಲ್ಲಿನ ವೈದ್ಯರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನಗಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಗೋವಿಂದ ಅವರು ಹೇಳಿಕೆ ನೀಡಿದ್ದಾರೆ. ‘ಆದಷ್ಟು ಬೇಗ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ. ಆ ಭರವಸೆ ನಮಗೆ ಇದೆ. ಕಾಲಿಗೆ ಗುಂಡು ತಾಗಿದೆ. ರಿವೋಲ್ವಾರ್ ಕೈ ಜಾರಿ ಕೆಳಗೆ ಬಿದ್ದಾಗ ಗುಂಡು ಹಾರಿತ್ತು’ ಎಂದು ಗೋವಿಂದ ಸಹೋದರ ಕೀರ್ತಿ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.