ಬಿಗ್ ಬಾಸ್ನಲ್ಲಿ ನಾನು ಟಾಯ್ಲೆಟ್ ಕ್ಲೀನ್ ಮಾಡಬೇಕಾ? ಸ್ಟಾರ್ ನಟನ ಪತ್ನಿಯ ತಿರುಗೇಟು
ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಸುನಿತಾ ಅಹುಜಾ ಅವರಿಗೆ ‘ಬಿಗ್ ಬಾಸ್’ ಶೋ ಬಗ್ಗೆ ಪಶ್ನೆ ಎದುರಾಗಿದೆ. ಅದಕ್ಕೆ ಅವರು ಈ ರೀತಿ ಉತ್ತರ ನೀಡಿದ್ದಾರೆ. ತಮ್ಮನ್ನು ತಾವು ಗೌರಿ ಖಾನ್ಗೆ ಹೋಲಿಸಿಕೊಂಡಿದ್ದಾರೆ. ಸ್ಪರ್ಧಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವಂತಹ ಪರಿಸ್ಥಿತಿ ತಮಗೆ ಇನ್ನೂ ಬಂದಿಲ್ಲ ಎಂದು ಸುನಿತಾ ಅಹುಜಾ ಅವರು ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮ ಹಲವು ಭಾಷೆಯಲ್ಲಿ ಫೇಮಸ್ ಆಗಿದೆ. ಪ್ರತಿ ವರ್ಷ ಆರಂಭ ಆಗುವ ಹೊಸ ಸೀಸನ್ನಲ್ಲಿ ಯಾರು ಸ್ಪರ್ಧಿಗಳಾಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಇದ್ದೇ ಇರುತ್ತದೆ. ಶೋ ಆರಂಭಕ್ಕೂ ಮುನ್ನ ಹಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತವೆ. ಬಾಲಿವುಡ್ನ ಸ್ಟಾರ್ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರಿಗೂ ಇತ್ತೀಚೆಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಮಾತನಾಡುವಾಗ ಅವರು ಖಡಕ್ ಆಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಆಫರ್ ಕೊಟ್ಟವರಿಗೂ ಅವರು ಕೆಲವು ಮರುಪ್ರಶ್ನೆ ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..
‘ಕಳೆದ ನಾಲ್ಕು ವರ್ಷಗಳಿಂದ ಅವರು ನನಗೆ ಆಫರ್ ನೀಡುತ್ತಿದ್ದಾರೆ. ಅನಿಲ್ ಕಪೂರ್ ನಡೆಸಿಕೊಟ್ಟಿದ್ದ ಒಟಿಟಿ ವರ್ಷನ್ಗೂ ಕರೆದಿದ್ದಾರೆ. ಎರಡು ಬಾರಿ ನನಗೆ ಆಫರ್ ಬಂದಿತ್ತು. ನಿಮಗೇನು ಹುಚ್ಚು ಹಿಡಿದಿದೆಯಾ? ನಾನು ಬಿಗ್ ಬಾಸ್ಗೆ ಹೋಗಿ ಟಾಯ್ಲೆಟ್ ಕ್ಲೀನ್ ಮಾಡ್ತೀನಿ ಅಂತ ನೀವು ಅಂದುಕೊಂಡಿದ್ದೀರಾ ಎಂದು ನಾನು ಅವರಿಗೆ ಕೇಳಿದೆ’ ಎಂದಿದ್ದಾರೆ ಸುನಿತಾ ಅಹುಜಾ.
‘ನಿಮಗೆ ಬಿಗ್ ಬಾಸ್ ಶೋನಿಂದ ಆಫರ್ ಬಂದಿದೆಯಾ’ ಎಂದು ಪ್ರಶ್ನೆ ಮಾಡಿದ ಸಂದರ್ಶಕರಿಗೂ ಸುನಿತಾ ಅಹುಜಾ ಅವರು ಮರುಪ್ರಶ್ನೆ ಹಾಕಿದ್ದಾರೆ. ‘ನೀವು ನನಗೆ ಇಂಥ ಪ್ರಶ್ನೆ ಕೇಳುತ್ತೀರಲ್ಲ.. ಶಾರುಖ್ ಖಾನ್ ಪತ್ನಿ ಗೌರಿ ಖಾನ್ಗೆ ಇದೇ ಪ್ರಶ್ನೆ ಕೇಳುತ್ತೀರಾ? ನಾವು ಆರ್ಥಿಕವಾಗಿ ಕಷ್ಟದಲ್ಲಿದ್ದೇವೆ ಅಂತ ನೀವು ಭಾವಿಸಿದ್ದೀರಾ? ನಾನು ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡುವುದಿಲ್ಲ’ ಎಂದು ಸುನಿತಾ ಅಹುಜಾ ಅವರು ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮವನ್ನು ಸುನಿತಾ ಅಹುಜಾ ಅವರು ಪೂರ್ತಿಯಾಗಿ ತಿರಸ್ಕರಿಸುತ್ತಿಲ್ಲ. ಸ್ಪರ್ಧಿ ಆಗುವ ಬದಲಿಗೆ ನಿರೂಪಕಿ ಆಗಲು ಅವರಿಗೆ ಆಸಕ್ತಿ ಇದೆ. ಸ್ಪರ್ಧಿ ಆಗಲು ಆಫರ್ ನೀಡಿದ ಶೋ ಆಯೋಜಕರಿಗೆ ಅವರು ಇದೇ ವಿಚಾರವನ್ನು ತಿಳಿಸಿದ್ದಾರಂತೆ. ‘ನೀವು ಯಾರ ಜೊತೆ ಮಾತನಾಡುತ್ತಿದ್ದೀರಿ ಅಂತ ನಿಮಗೆ ತಿಳಿದಿದೆಯಾ? ಸಲ್ಮಾನ್ ಖಾನ್ ಜೊತೆ ನಿಂತು ಶೋ ನಡೆಸಿಕೊಡಬೇಕು ಎಂಬುದಾದರೆ ಮಾತ್ರ ನನ್ನ ಬಳಿ ಬನ್ನಿ ಅಂತ ಅವರಿಗೆ ಹೇಳಿ ಕಳಿಸಿದ್ದೇನೆ’ ಎಂದಿದ್ದಾರೆ ಸುನಿತಾ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11: ಹೊಸ ಆ್ಯಂಕರ್ ಬಗ್ಗೆ ಸುಳಿವು ನೀಡಿದ ‘ಕಲರ್ಸ್ ಕನ್ನಡ’
ಇಷ್ಟೆಲ್ಲ ಜಂಭ ಕೊಚ್ಚಿಕೊಂಡ ಸುನಿತಾ ಅಹುಜಾ ಅವರು ಬಿಗ್ ಬಾಸ್ ಕಾರ್ಯಕ್ರಮದ ಬದಲು ‘ಕಾಫಿ ವಿತ್ ಕರಣ್’ ಶೋನಿಂದ ಆಫರ್ ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಅವರಿಗೆ ಇನ್ನೂ ಆಹ್ವಾನ ಬಂದಿಲ್ಲ. ಈ ಬಗ್ಗೆ ನಟ ಗೋವಿಂದ ಮತ್ತು ಕರಣ್ ಜೋಹರ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.