
ಬಾಲಿವುಡ್‌ನ ‘ಡಾನ್ 3’ ಸಿನಿಮಾ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ರಣವೀರ್ ಸಿಂಗ್ ಮತ್ತು ‘ಎಕ್ಸೆಲ್ ಎಂಟರ್‌ಟೇನ್‌ಮೆಂಟ್’ ನಿರ್ಮಾಣ ಸಂಸ್ಥೆ ನಡುವಿನ ಮುನಿಸು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇತ್ತೀಚೆಗೆ ನಡೆದ ಸಂಧಾನ ಸಭೆಯೊಂದರ ಆಸಕ್ತಿದಾಯಕ ಮಾಹಿತಿ ಈಗ ಹೊರಬಿದ್ದಿದೆ. ಚಿತ್ರದಿಂದ ಹೊರನಡೆದ ಕಾರಣ ಎಕ್ಸೆಲ್ ಸಂಸ್ಥೆಗೆ ಉಂಟಾಗಿದ್ದ 45 ಕೋಟಿ ರೂಪಾಯಿ ನಷ್ಟಕ್ಕೆ ಪರಿಹಾರವಾಗಿ ರಣವೀರ್ ಸಿಂಗ್ 10 ಕೋಟಿ ರೂಪಾಯಿ ನೀಡಲು ಒಪ್ಪಿದ್ದರು ಮತ್ತು ಬಾಕಿ ಹಣದಲ್ಲಿ ಡಿಸ್ಕೌಂಟ್ ಕೇಳಿದ್ದರು ಎಂದು ವರದಿಯಾಗಿದೆ.
ವಿಷಯ ಗಂಭೀರ ಸ್ವರೂಪ ಪಡೆಯುವ ಮುನ್ನವೇ, ಮಾರ್ಚ್ ಮೊದಲ ವಾರದಲ್ಲಿ ಬಾಲಿವುಡ್‌ನ ಪ್ರಮುಖರಾದ ಆಮಿರ್ ಖಾನ್, ಕರಣ್ ಜೋಹರ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಸಮ್ಮುಖದಲ್ಲಿ ಒಂದು ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ರಣವೀರ್ ಸಿಂಗ್ ತಂಡವು ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರಿಗೆ ಒಂದು ವಿಶೇಷ ಆಫರ್ ನೀಡಿತ್ತು.
45 ಕೋಟಿ ರೂಪಾಯಿ ಪರಿಹಾರ ಮೊತ್ತದಲ್ಲಿ ಎಕ್ಸೆಲ್ ಸಂಸ್ಥೆಗೆ ತಕ್ಷಣವೇ 10 ಕೋಟಿ ರೂಪಾಯಿ ನಗದು ಪರಿಹಾರ ನೀಡಲು ರಣವೀರ್ ಒಪ್ಪಿದ್ದರು. ಇದರ ಜೊತೆಗೆ, ಮುಂದಿನ ದಿನಗಳಲ್ಲಿ ಎಕ್ಸೆಲ್ ಸಂಸ್ಥೆ ಮಾಡುವ ಯಾವುದಾದರೂ ಹೊಸ ಸಿನಿಮಾದಲ್ಲಿ ರಣವೀರ್ ನಟಿಸುವ ಭರವಸೆ ನೀಡಿದ್ದರು. ತಮ್ಮ ಸಂಭಾವನೆಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಡಿಸ್ಕೌಂಟ್ ನೀಡೋದಾಗಿ ಹೇಳಿದ್ದರು. ಈ ಮೂಲಕ ಒಟ್ಟು 35 ಕೋಟಿ ರೂಪಾಯಿ ಹಂತ-ಹಂತವಾಗಿ ಸರಿದೂಗಿಸಿ, ವೃತ್ತಿಪರ ಬಾಂಧವ್ಯವನ್ನು ಮುಂದುವರಿಸುವುದು ರಣವೀರ್ ಅವರ ಆಲೋಚನೆಯಾಗಿತ್ತು.
ಆದರೆ ರಣವೀರ್ ಸಿಂಗ್ ಅವರ ಈ ಡಿಸ್ಕೌಂಟ್ ಆಫರ್ ಅನ್ನು ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನೇರವಾಗಿ ತಿರಸ್ಕರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿನಿಮಾದ ಡೇಟ್ಸ್ ಮತ್ತು ಗೊಂದಲಗಳಿಂದಾಗಿ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಅವರು ವಾದಿಸಿದ್ದಾರೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ರಣವೀರ್ ಜೊತೆ ಮತ್ತೆ ಕೆಲಸ ಮಾಡುವ ಯಾವುದೇ ಉದ್ದೇಶ ತಮಗಿಲ್ಲದ ಕಾರಣ, ಮುಂದಿನ ಚಿತ್ರದಲ್ಲಿ ಡಿಸ್ಕೌಂಟ್ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅವರ ವಾದ ಆಗಿತ್ತು. ಏನೇ ಇದ್ದರೂ ತಮಗೆ ತಕ್ಷಣವೇ ಸಂಪೂರ್ಣ ನಗದು ಪರಿಹಾರ ಸಿಗಬೇಕು ಎಂದು ಎಕ್ಸೆಲ್ ಸಂಸ್ಥೆ ಪಟ್ಟು ಹಿಡಿದಿತ್ತು.
ಮತ್ತೊಂದೆಡೆ, ರಣವೀರ್ ಸಿಂಗ್ ಆಪ್ತರ ಪ್ರಕಾರ ಅವರದ್ದೇ ಆದ ಬೇರೆ ವಾದವಿದೆ. ರಣವೀರ್ ಅವರ ಕೆರಿಯರ್ ಕೊಂಚ ಡಲ್ ಆಗಿದ್ದ ಸಮಯದಲ್ಲಿ ಎಕ್ಸೆಲ್ ಸಂಸ್ಥೆಯು ಅವರ ಬದಲಿಗೆ ಹೃತಿಕ್ ರೋಷನ್ ಸೇರಿದಂತೆ ಇತರ ನಟರನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು, ಇದು ರಣವೀರ್‌ಗೆ ಬೇಸರ ತರಿಸಿತ್ತು. ನಿರ್ಮಾಣ ಸಂಸ್ಥೆಗೆ ತಮ್ಮ ಮೇಲೆ ಸಂಪೂರ್ಣ ಭರವಸೆ ಇಲ್ಲ ಮತ್ತು ಚಿತ್ರದ ಸ್ಕ್ರಿಪ್ಟ್ ಕೂಡ ಅಷ್ಟೊಂದು ಬಲಿಷ್ಠವಾಗಿಲ್ಲದ ಕಾರಣ ಅವರು ಚಿತ್ರದಿಂದ ಹೊರನಡೆಯುವ ತೀರ್ಮಾನ ತಗೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು?
ಸದ್ಯ’ಎಫ್‌ಡಬ್ಲ್ಯೂಐಸಿಇ’ ಒಕ್ಕೂಟವು ರಣವೀರ್ ವಿರುದ್ಧ ಅಸಹಕಾರ ಆದೇಶ ಹೊರಡಿಸಿರುವುದರಿಂದ ಈ ವಿವಾದ ಮತ್ತಷ್ಟು ಕಠಿಣ ಸ್ವರೂಪ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.