ಇತ್ತೀಚೆಗಷ್ಟೆ ಜನಪ್ರಿಯ ಪಾಪ್ ಗಾಯಕಿ ರಿಯಾನಾ (Rihana) ಭಾರತಕ್ಕೆ ಭೇಟಿ ನೀಡಿದ್ದರು. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ರ ವಿವಾಹ ಪೂರ್ವ ಸಂಭ್ರಮ (ಪ್ರೀ ವೆಡ್ಡಿಂಗ್) ಕಾರ್ಯಕ್ರಮದಲ್ಲಿ ಹಾಡಿ, ಕುಣಿದು ಕುಪ್ಪಳಿಸಿದ್ದರು. ರಿಯಾನಾ ಮಾತ್ರವೇ ಅಲ್ಲದೆ ಇನ್ನೂ ಕೆಲವು ವಿದೇಶಿ ಗಾಯಕರು ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದರು. ಇದೀಗ ಮತ್ತೊಬ್ಬ ಜಗದ್ವಿಖ್ಯಾತ ಗಾಯಕ ಭಾರತಕ್ಕೆ ಭೇಟಿ ನೀಡಿದ್ದಾರೆ. ಅದುವೇ ಎಡ್ ಶೀರನ್. ‘ಶೇಪ್ ಆಫ್ ಯು’ ಸೇರಿದಂತೆ ಹಲವು ಜನಪ್ರಿಯ ಹಾಡುಗಳಿಂದ ಖ್ಯಾತರಾಗಿರುವ ಎಡ್ ಶೀರನ್, ಭಾರತಕ್ಕೆ ಭೇಟಿ ನೀಡಿದ್ದು, ಶಾರುಖ್ ಖಾನ್ ನಿವಾಸಕ್ಕೆ ಅತಿಥಿಯಾಗಿ ಹೋಗಿದ್ದರು.
ಭಾರತದಲ್ಲಿ ಕಾರ್ಯಕ್ರಮ ನೀಡಲೆಂದು ಬಂದಿರುವ ಎಡ್ ಶೀರನ್, ಶಾರುಖ್ ಖಾನ್ ನಿವಾಸಕ್ಕೆ ಅತಿಥಿಯಾಗಿ ಹೋಗಿದ್ದರು. ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಎಡ್ ಶೀರನ್ ಅವರನ್ನು ಮನ್ನತ್ಗೆ ಸ್ವಾಗತಿಸಿದ್ದು ತಮ್ಮ ಕೆಲವು ಗೆಳತಿಯರನ್ನು ಕರೆಸಿ ಔತಣ ಕೂಟ ಏರ್ಪಡಿಸಿದ್ದರು. ಎಡ್ ಶೀರನ್ ಜೊತೆಗಿನ ಕೆಲವು ಚಿತ್ರಗಳನ್ನು ಸಹ ಗೌರಿ ಖಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಎಡ್ ಶೀರನ್, ಗೌರಿ ಹಾಗೂ ಅವರ ಗೆಳೆಯರಿಗಾಗಿ ಕೆಲವು ಹಾಡುಗಳನ್ನು ಸಹ ಹಾಡಿದ್ದಾರೆ. ಎಡ್ ಶೀರನ್, ತಮ್ಮ ಮನೆಯಲ್ಲಿ ಹಾಡು ಹಾಡಿರುವ ವಿಡಿಯೋವನ್ನು ಗೌರಿ ಖಾನ್ ಹಂಚಿಕೊಂಡಿದ್ದು, ‘ನಮ್ಮ ಸಂಜೆಯನ್ನು ಸುಂದರಗೊಳಿಸಿದ್ದಕ್ಕೆ, ನಮ್ಮೊಂದಿಗೆ ಸಮಯ ಕಳೆದಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಅನ್ನು ಅವಮಾನಿಸಿದರೇ ಶಾರುಖ್ ಖಾನ್? ಇಲ್ಲಿದೆ ಸತ್ಯ
ಅತಿಥಿಯಾಗಿ ಆಗಮಿಸಿದ್ದ ಎಡ್ ಶೀರನ್ಗೆ ಗೌರಿ ಖಾನ್, ತಮ್ಮ ಪುತ್ರ ಆರ್ಯನ್ ಖಾನ್ ಮಾಲೀಕತ್ವದ ಡಿಯೋಲ್ ಬ್ರ್ಯಾಂಡ್ನ ಜಾಕೆಟ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಗೌರಿ ಕೊಟ್ಟ ಉಡುಗೊರೆಯನ್ನು ಧರಿಸಿಕೊಂಡು, ಗೌರಿ ಖಾನ್ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಡ್ ಶೀರನ್. ‘ಜಾಕೆಟ್ ನಿಮ್ಮ ಮೇಲೆ ಬಹಳ ಸುಂದರವಾಗಿ ಕಾಣುತ್ತಿದೆ’ ಎಂದು ಗೌರಿ ಖಾನ್ ಹೊಗಳಿದ್ದಾರೆ. ಎಡ್ ಶೀರನ್ ಜೊತೆಗೆ ಗೌರಿ ತಮ್ಮ ಗೆಳತಿಯರಾದ ನಿರ್ದೇಶಕಿ ಫರ್ಹಾ ಖಾನ್ ಹಾಗೂ ಇನ್ನೂ ಕೆಲವರನ್ನು ಮನೆಗೆ ಆಹ್ವಾನಿಸಿದ್ದರು. ಅವರೊಟ್ಟಿಗಿನ ಚಿತ್ರಗಳನ್ನು ಸಹ ಗೌರಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಿಯಾನಾ ಬಂದಾಗಲೂ ಸಹ ಶಾರುಖ್ ಖಾನ್ ಹಾಗೂ ಗೌರಿ ಖಾನ್ ರಿಯಾನಾ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ರಿಯಾನಾ ಜೊತೆಗೆ ಶಾರುಖ್ ಖಾನ್ ಫೋಟೊ ಸಹ ತೆಗೆಸಿಕೊಂಡಿದ್ದರು. ಮತ್ತೊಬ್ಬ ಪಾಪ್ ಗಾಯಕ ಏಕಾನ್ ಸಹ ಶಾರುಖ್ ಖಾನ್ಗೆ ಹಳೆಯ ಪರಿಚಯ. ಶಾರುಖ್ ನಿರ್ಮಾಣ ಮಾಡಿದ್ದ ‘ರಾ ಒನ್’ ಸಿನಿಮಾಕ್ಕೆ ಏಕಾನ್ ಹಾಡು ಹಾಡಿದ್ದರು. ಇತ್ತೀಚೆಗೆ ಅನಂತ್ ಅಂಬಾನಿಯ ಮನೆಗೆ ಏಕಾನ್ ಬಂದಾಗಲೂ ಸಹ ಏಕನ್, ಶಾರುಖ್ ಖಾನ್ರನ್ನು ಸಹೋದರ ಎಂದು ಕರೆದು, ವೇದಿಕೆ ಕರೆತಂದು ಒಟ್ಟಿಗೆ ಡ್ಯಾನ್ಸ್ ಮಾಡಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ