ನಟ ಇಮ್ರಾನ್ ಹಶ್ಮಿ (Emraan Hashmi) ಅವರು ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಆದರೆ, ಒಂದು ಹಂತದಲ್ಲಿ ಅವರಿಗೆ ಇದ್ದ ಜನಪ್ರಿಯತೆ ಕುಗ್ಗಿತು. ಇದಕ್ಕೆ ಕಾರಣಗಳು ಹಲವು. ಈಗ ಅವರು ಬಾಲಿವುಡ್ಗೆ ಕಂಬ್ಯಾಕ್ ಮಾಡಿದ್ದಾರೆ. ‘ಬಾರ್ಡ್ ಆಫ್ ಬ್ಲಡ್’ ವೆಬ್ ಸೀರಿಸ್ನಿಂದ ಅವರಿಗೆ ಮತ್ತೆ ಜನಪ್ರಿಯತೆ ಸಿಕ್ಕಿದೆ. ಹಲವು ಚಿತ್ರಗಳು ಅವರನ್ನು ಹುಡುಕಿ ಬರುತ್ತಿವೆ. ಈಗ ಇಮ್ರಾನ್ ಹಶ್ಮಿ ಬಗ್ಗೆ ವದಂತಿ ಒಂದು ಹಬ್ಬಿತ್ತು. ಈ ವಿಚಾರವನ್ನು ಇಮ್ರಾನ್ ಹಶ್ಮಿ ಅಲ್ಲಗಳೆದಿದ್ದಾರೆ.
ಇಮ್ರಾನ್ ಹಶ್ಮಿ ಅವರು ‘ಗ್ರೌಂಡ್ ಜೀರೋ’ ಚಿತ್ರದ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ತೆರಳಿದ್ದರು. ಈ ಚಿತ್ರದ ಶೂಟಿಂಗ್ ಮಾಡುವಾಗ ಕೆಲವರು ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿ ಆಗಿತ್ತು. ಅಷ್ಟೇ ಅಲ್ಲ, ಇಮ್ರಾನ್ ಹಶ್ಮಿ ಮೇಲೆ ಕಲ್ಲು ಎಸೆದವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಇಮ್ರಾನ್ ಹಶ್ಮಿ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಆಗೇ ಇಲ್ಲ ಎಂದಿದ್ದಾರೆ ಇಮ್ರಾನ್.
‘ಕಾಶ್ಮೀರದ ಜನರು ತುಂಬಾ ಆತ್ಮೀಯರಾಗಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಶ್ರೀನಗರ ಮತ್ತು ಪಹಲ್ಗಾಮ್‌ನಲ್ಲಿ ಶೂಟಿಂಗ್ ಸಂತಸದಿಂದ ನಡೆದಿದೆ. ಕಲ್ಲು ತೂರಾಟದಲ್ಲಿ ನನಗೆ ಗಾಯವಾಗಿದೆ ಎಂಬ ಸುದ್ದಿ ಸುಳ್ಳು’ ಎಂದು ಇಮ್ರಾನ್ ಹಶ್ಮಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
The people of Kashmir have been very warm and welcoming, it has been an absolute joy shooting in Srinagar and Pahalgam. The news of me being injured in a stone pelting incident is inaccurate .
— Emraan Hashmi (@emraanhashmi) September 20, 2022
ಇದನ್ನೂ ಓದಿ: ಗಳಿಕೆಯಲ್ಲಿ ಹಿಂದೆ ಬಿತ್ತು ಬಿಗ್ ಬಿ, ಇಮ್ರಾನ್ ಹಶ್ಮಿ ನಟನೆಯ ‘ಚೆಹ್ರೆ’; ಎರಡು ದಿನದಲ್ಲಿ ಗಳಿಸಿದ್ದೆಷ್ಟು?
‘ಬಾರ್ಡ್ ಆಫ್ ಬ್ಲಡ್’ ವೆಬ್ ಸರಣಿ 2019ರಲ್ಲಿ ಒಟಿಟಿ ಮೂಲಕ ರಿಲೀಸ್ ಆಯಿತು. ಪ್ರೊಫೆಸರ್ ಕಬೀರ್ ಆನಂದ್ ಆಗಿ ಎಲ್ಲರ ಗಮನ ಸೆಳೆದರು ಇಮ್ರಾನ್. ಇದಾದ ಬಳಿಕ ಹಲವು ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬಂದವು. ‘ಟೈಗರ್ 3’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹೀರೋ. ಸಲ್ಲುಗೆ ಎದುರಾಳಿಯಾಗಿ ಈ ಪಾತ್ರ ಮೂಡಿ ಬರಲಿದೆ ಎನ್ನಲಾಗುತ್ತಿದೆ. 2023ರಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.