ಪ್ರಯಾಗ್ರಾಜ್ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಅನೇಕ ಫೇಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಅಂಬಾನಿ ಜೊತೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ, ಈ ಮೂವರು ಮಹಾ ಕುಂಭ ಮೇಳಕ್ಕೆ ತಲುಪಿದ್ದಾರೆ ಮತ್ತು ಈ ವಿಡಿಯೋ ಅಲ್ಲಿಯದು ಎಂದು ಹೇಳಲಾಗುತ್ತಿದೆ.
ಏನು ವೈರಲ್ ಆಗುತ್ತಿರುವುದೇನು?:
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಮಹಾ ಕುಂಭ ಮೇಳದಲ್ಲಿ ಅನಂತ್ ಅಂಬಾನಿ ಮತ್ತು ಸಲ್ಮಾನ್ ಖಾನ್” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ವಿಡಿಯೋ ಮಹಾಕುಂಭದದ್ದಲ್ಲ, ಬದಲಾಗಿ ಜಾಮ್ನಗರದಲ್ಲಿ ಅಂಬಾನಿ ಕುಟುಂಬವು ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ ಸಂದರ್ಭದ್ದಾಗಿದೆ.
Fact Check: ಮಹಾಕುಂಭಕ್ಕೆ ತೆರಳುತ್ತಿದ್ದ ಬಸ್ ಅಪಘಾತ ಎಂದು ಪಾಕಿಸ್ತಾನದ ವಿಡಿಯೋ ವೈರಲ್
ವೈರಲ್ ಆದ ಈ ಹಕ್ಕಿನ ಸತ್ಯಾಸತ್ಯತೆಯನ್ನು ತಿಳಿಯಲು, ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಿದೆವು. ಸಲ್ಮಾನ್ ಖಾನ್ ಮತ್ತು ಅನಂತ್ ಅಂಬಾನಿ ಮಹಾ ಕುಂಭಮೇಳಕ್ಕೆ ಹೋಗುವ ಬಗ್ಗೆ ನಮಗೆ ಎಲ್ಲಿಯೂ ವಿಶ್ವಾಸರ್ಹ ಸುದ್ದಿ ಕಂಡುಬರಲಿಲ್ಲ.
ಇದಾದ ನಂತರ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಹುಡುಕಿದೆವು. ಆಗ ಡಿಸೆಂಬರ್ 2024 ರಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ವಿಡಿಯಫ ಅಪ್‌ಲೋಡ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ. akramvarkati_srk__1763 ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಡಿಸೆಂಬರ್ 30, 2024 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಜಾಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ಸಲ್ಮಾನ್ ಖಾನ್” ಎಂದು ಬರೆದಿದ್ದಾರೆ.
ಇಲ್ಲಿಂದ ಸುಳಿವನ್ನು ಪಡೆದುಕೊಂಡ ನಾವು ಕೀವರ್ಡ್ ಮೂಲಕ ಹುಡುಕಿದೆವು. ಆಗ ಡಿಸೆಂಬರ್ 27 ರಂದು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 59 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾಮ್‌ನಗರದ ಅಂಬಾನಿ ಕುಟುಂಬವು ಅದ್ದೂರಿ ಪಾರ್ಟಿಯನ್ನು ಆಯೋಜಿಸಿತ್ತು ಎಂದು ಅನೇಕ ಮಾಧ್ಯಮಗಳು ಸುದ್ದಿ ಪ್ರಕಟಿಸಿರುವುದು ಕಂಡುಬಂತು.
ಸಲ್ಮಾನ್ ಖಾನ್ ಮೊದಲು ತನ್ನ ಮನೆಯಲ್ಲಿ ಕೇಕ್ ಕತ್ತರಿಸಿದರು. ಅದಾದ ನಂತರ ಅವರ ಕುಟುಂಬ ಜಾಮ್ನಗರಕ್ಕೆ ತೆರಳಿ ಅಲ್ಲಿ ಅನಂತ್ ಅಂಬಾನಿ ಅವರಿಗಾಗಿ ವಂಟಾರಾದಲ್ಲಿ ಪಾರ್ಟಿ ಆಯೋಜಿಸಿದ್ದರು, ಅಲ್ಲಿ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ವಿಶೇಷ ದಿನವನ್ನು ಆಚರಿಸಿದರು ಎಂದು ಟಿವಿ9 ಹಿಂದಿ ಸುದ್ದಿ ಪ್ರಕಟಿಸಿದೆ.
ಈ ಮಾಹಿತಿಯ ಆಧಾರದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಸಲ್ಮಾನ್ ಖಾನ್, ಅನಂತ್ ಅಂಬಾನಿ ಮತ್ತು ರಾಧಿಕಾ ಅಂಬಾನಿ ಒಟ್ಟಿಗೆ ಕಾಣಿಸಿಕೊಂಡಿರುವ ವೈರಲ್ ವಿಡಿಯೋ ಮಹಾ ಕುಂಭ ಮೇಳದ್ದಲ್ಲ. ಮಹಾ ಕುಂಭ ಮೇಳಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ. ಈ ವಿಡಿಯೋ ಜಾಮ್ನಗರದ್ದಾಗಿದ್ದು, ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದು ಅಂಬಾನಿ ಕುಟುಂಬ ಪಾರ್ಟಿ ಆಯೋಜಿಸಿದ ಸಂದರ್ಭದ್ದಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Wed, 5 February 25