ಆಮಿರ್ ಖಾನ್ ನನ್ನ ತಂದೆ ಅಂತ ಹೇಳಿಕೊಳ್ಳಲಿಲ್ಲ ಪುತ್ರ ಜುನೈದ್ ಖಾನ್; ಕಾರಣ ಏನು?
ಬಾಲಿವುಡ್ ನಟ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅಪ್ಪ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಕೂಡ ಜುನೈದ್ ಖಾನ್ ಅವರು ಸಖತ್ ಸಿಂಪಲ್ ಆಗಿರುತ್ತಾರೆ.

ಸ್ಟಾರ್ ನಟರ ಮಕ್ಕಳಿಗೆ ವಿಶೇಷ ಸೌಲಭ್ಯಗಳು ಇರುತ್ತವೆ. ಹುಟ್ಟುವಾಗಲೇ ಐಷಾರಾಮಿ ಜೀವನವನ್ನು ಅವರು ನೋಡುತ್ತಾರೆ. ತಿರುಗಾಡಲು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳು ಅವರ ಬಳಿ ಇರುತ್ತವೆ. ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಕೂಡ ಈ ಎಲ್ಲ ಲಕ್ಷುರಿಗಳನ್ನು ಕಂಡಿದ್ದಾರೆ. ಹಾಗಿದ್ದರೂ ಸಹ ಅವರು ಸಿಂಪಲ್ ಆಗಿರಲು ಬಯಸುತ್ತಾರೆ. ಮುಂಬೈನಲ್ಲಿ ಅವರು ಎಷ್ಟೋ ಬಾರಿ ಆಟೋದಲ್ಲಿ ಓಡಾಡಿದ್ದಾರೆ. ಆ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಜುನೈದ್ ಖಾನ್ ಈಗ ಹಂಚಿಕೊಂಡಿದ್ದಾರೆ.
ಜುನೈದ್ ಖಾನ್ ಅವರು ‘ಲವ್ಯಾಪ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಶ್ರೀದೇವಿ ಪುತ್ರಿ ಖುಷಿ ಕಪೂರ್ ಅಭಿನಯಿಸಿದ್ದಾರೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜುನೈದ್ ಖಾನ್ ಅವರು ಕೆಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.
ಮುಂಬೈನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇರುತ್ತದೆ. ಅಲ್ಲದೇ ಕಾರಿನಲ್ಲಿ ಹೋದರೆ ಪಾರ್ಕಿಂಗ್ ಸಮಸ್ಯೆ ಕೂಡ ಎದುರಾಗುತ್ತದೆ. ಆ ಕಾರಣದಿಂದ ಜುನೈದ್ ಖಾನ್ ಅವರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ತಮ್ಮನ್ನು ಯಾರೂ ಕೂಡ ಅಷ್ಟಾಗಿ ಗುರುತಿಸುವುದಿಲ್ಲ ಎಂಬ ಕಾರಣದಿಂದ ಅವರು ನಿಶ್ಚಿಂತೆಯಿಂದ ಆಟೋದಲ್ಲಿ ಓಡಾಡುತ್ತಿದ್ದರು. ಆದರೆ ತಾನು ಆಮಿರ್ ಖಾನ್ ಪುತ್ರ ಎಂದು ಅವರು ಎಂದಿಗೂ ಹೇಳಿಕೊಳ್ಳುತ್ತಿರಲಿಲ್ಲವಂತೆ. ಗೊತ್ತಾದರೆ ಆಟೋದಲ್ಲಿ ಪ್ರಯಾಣ ಮಾಡುವುದು ಕಷ್ಟ ಆಗುತ್ತದೆ ಎಂಬುದೇ ಅದಕ್ಕೆ ಕಾರಣ.
‘ಒಮ್ಮೆ ನಾನು ನಾಟಕದ ತಾಲೀಮಿಗಾಗಿ ಬಾಂದ್ರಾಗೆ ತೆರಳುತ್ತಿದ್ದೆ. ಅದೇ ಸಮಯದಲ್ಲಿ ಯಶ್ ರಾಜ್ ಸ್ಟುಡಿಯೋದಿಂದ ಅಪ್ಪ ವಾಪಸ್ ಬರುತ್ತಿದ್ದರು. ಒಂದು ಟ್ರಾಫಿಕ್ ಸಿಗ್ನಲ್ನಲ್ಲಿ ಅವರ ಕಾರು ನನ್ನ ಆಟೋದ ಪಕ್ಕದಲ್ಲೇ ನಿಂತಿತು. ಆಗ ನಾನು ನನ್ನ ಮೊಬೈಲ್ ಬಳಸುತ್ತಿದ್ದೆ. ಅಪ್ಪ ಕಾರಿನ ಗ್ಲಾಸ್ ಇಳಿಸಿ ನನ್ನನ್ನು ಮಾತನಾಡಿಸಿದರು. ಸಿಗ್ನಲ್ ಬಿಟ್ಟಾಗ ನಾವು ಮುಂದೆ ಸಾಗಿದೆವು. ನನ್ನನ್ನು ಆಮಿರ್ ಖಾನ್ ಮಾತನಾಡಿಸಿದ್ದು ನೋಡಿ ಆಟೋ ಡ್ರೈವರ್ಗೆ ಶಾಕ್ ಆಯಿತು. ನಿಮಗೆ ಅವರ ಪರಿಚಯ ಇದೆಯಾ ಎಂದು ಆಟೋದವನು ಕೇಳಿದ. ನಾವು ಒಂದೇ ಏರಿಯಾದಲ್ಲಿ ವಾಸಿಸುತ್ತೇವೆ ಅಂತ ನಾನು ಹೇಳಿದೆ’ ಎಂದಿದ್ದಾರೆ ಜುನೈದ್ ಖಾನ್.
ಇದನ್ನೂ ಓದಿ: ಆಮಿರ್ ಖಾನ್ ಜತೆ ‘ಗಜಿನಿ 2’ ಸಿನಿಮಾ ಮಾಡಲು ಮುಂದಾದ ಅಲ್ಲು ಅರ್ಜುನ್ ತಂದೆ
‘ಲವ್ಯಾಪ’ ಸಿನಿಮಾದಲ್ಲಿ ಜುನೈದ್ ಖಾನ್ ಜೊತೆ ನಟಿಸಿರುವ ಖುಷಿ ಕಪೂರ್ ಅವರು ಸಂಪೂರ್ಣ ಉಲ್ಟಾ. ಅವರು ಎಂದಿಗೂ ಕೂಡ ಆಟೋದಲ್ಲಿ ಪ್ರಯಾಣ ಮಾಡಿಲ್ಲ. ‘ನನಗೆ ಆಟೋದಲ್ಲಿ ಹೋಗಲು ಮನೆಯವರು ಅನುಮತಿ ಕೊಟ್ಟಿಲ್ಲ’ ಎಂದು ಅವರು ಹೇಳಿದ್ದಾರೆ. ‘ಲವ್ಯಾಪ’ ಸಿನಿಮಾ ಫೆಬ್ರವರಿ 7ರಂದು ಬಿಡುಗಡೆ ಆಗುತ್ತಿದೆ. ಇದು ತಮಿಳಿನ ‘ಲವ್ ಟುಡೇ’ ಸಿನಿಮಾದ ಹಿಂದಿ ರಿಮೇಕ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.