ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಜೊತೆ ಒಂದೇ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಕೋಟ್ಯಂತರ ಮಂದಿ ಹಂಬಲಿಸುತ್ತಾರೆ. ಕರೀನಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಫೋಟೋ ಸಲುವಾಗಿ ಫ್ಯಾನ್ಸ್ ಮುಗಿಬೀಳುತ್ತಾರೆ. ಸೆಲೆಬ್ರಿಟಿಗಳು ಎಂದಮೇಲೆ ಇದೆಲ್ಲ ಸಹಜ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಮಿತಿ ಮೀರುತ್ತದೆ. ಇತ್ತೀಚೆಗೆ ಕರೀನಾ ಕಪೂರ್ ಖಾನ್ ಅವರಿಗೆ ಇದೇ ರೀತಿ ಆಗಿದೆ. ಅಭಿಮಾನಿಯೊಬ್ಬ ಎಲ್ಲರ ಎದುರು ಕರೀನಾ ಮೈ ಮೇಲೆ ಕೈ ಹಾಕಲು ಮುಂದಾಗಿದ್ದಾನೆ. ಆ ಕ್ಷಣ ಕರೀನಾ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋ (Kareena Kapoor Khan Viral Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ನಲ್ಲಿ ಕರೀನಾ ಕಪೂರ್ ಖಾನ್ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಮದುವೆ-ಮಕ್ಕಳು ಆದ ಬಳಿಕವೂ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಸ ಚಿತ್ರದ ಶೂಟಿಂಗ್ ಸಲುವಾಗಿ ಅವರು ಇತ್ತೀಚೆಗೆ ವಿದೇಶಕ್ಕೆ ತೆರಳಿದರು. ಅದಕ್ಕೂ ಮುನ್ನ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಈ ಘಟನೆ ನಡೆದಿದೆ.
ಒಂದೂವರೆ ವರ್ಷದ ಮಗ ಜಹಾಂಗೀರ್ ಅಲಿ ಖಾನ್ ಜೊತೆ ಕರೀನಾ ಕಪೂರ್ ಅವರು ವಿಮಾನ ನಿಲ್ದಾಣಕ್ಕೆ ಬಂದರು. ಆಗ ಒಂದಷ್ಟು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಆ ಗಡಿಬಿಡಿಯ ನಡುವೆಯೂ ಸಾಧ್ಯವಾದಷ್ಟು ಸಮಾಧಾನದಿಂದ ಕರೀನಾ ಅವರು ಸೆಲ್ಫಿಗೆ ಪೋಸ್ ನೀಡುತ್ತಿದ್ದರು. ಆಗ ಒಬ್ಬ ಅಭಿಮಾನಿ ಮಾತ್ರ ಕರೀನಾ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳಲು ಬಂದ. ಆತನ ವರ್ತನೆಯಿಂದ ಕರೀನಾಗೆ ನಿಜಕ್ಕೂ ಶಾಕ್ ಆಯಿತು. ಅವರ ಬಾಡಿಗಾರ್ಡ್ಸ್ ಕೂಡಲೇ ಅಲರ್ಟ್ ಆದರು. ನಟಿಯ ಮೈ ಮೇಲೆ ಕೈ ಹಾಕಲು ಬಂದ ವ್ಯಕ್ತಿಯನ್ನು ಕೂಡಲೇ ಪಕ್ಕಕ್ಕೆ ಸರಿಸಿದರು.
ಈ ರೀತಿಯ ಘಟನೆಗಳು ನಡೆದಾಗ ಸೆಲೆಬ್ರಿಟಿಗಳು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಅತಿಯಾಗಿ ವರ್ತಿಸಲು ಬಂದ ಅಭಿಮಾನಿಯ ವಿರುದ್ಧ ಕೂಗಾಡಿದ ಉದಾಹರಣೆಗಳು ಕೂಡ ಇದೆ. ಆದರೆ ಕರೀನಾ ಕಪೂರ್ ಅವರು ಆ ರೀತಿ ಮಾಡಿಲ್ಲ. ಅಭಿಮಾನಿಯ ವರ್ತನೆಯಿಂದ ಅವರಿಗೆ ಕಿರಿಕಿರಿ ಆಗಿದ್ದು ನಿಜ. ಅದು ಅವರ ಹಾವಭಾವದಲ್ಲೇ ಗೊತ್ತಾಗುತ್ತದೆ. ಹಾಗಿದ್ದರೂ ಕೂಡ ಅವರು ರೇಗಾಡದೇ ಸುಮ್ಮನೇ ಮುಂದೆ ಸಾಗಿದ್ದಾರೆ.
ಕರೀನಾ ಕಪೂರ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಿತಿ ಮೀರಿ ವರ್ತಿಸಿದ ಅಭಿಮಾನಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ‘ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.