
‘ಡಾನ್’ (Don) ಸಿನಿಮಾ ಸರಣಿ ಭಾರತದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಮೊದಲಿಗೆ ಅಮಿತಾಬ್ ಬಚ್ಚನ್ ನಟಿಸಿದ್ದ ಸಿನಿಮಾವನ್ನು ಶಾರುಖ್ ಖಾನ್ ನಾಯಕನನ್ನಾಗಿ ಹಾಕಿಕೊಂಡು ರೀಮೇಕ್ ಮಾಡಿಲಾಯ್ತು. ಸಿನಿಮಾ ನಿರ್ದೇಶನ ಮಾಡಿದ್ದು ಫರ್ಹಾನ್ ಅಖ್ತರ್, ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ‘ಡಾನ್’ ಹೆಸರು, ಪಾತ್ರವನ್ನೇ ಇರಿಸಿಕೊಂಡು ಹೊಸದೊಂದು ಥ್ರಿಲ್ಲರ್ ಕತೆ ಹೆಣೆದ ಫರ್ಹಾನ್ ಅಖ್ತರ್ ಅದನ್ನು 2011 ರಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾದಲ್ಲಿಯೂ ಶಾರುಖ್ ಖಾನ್ ನಾಯಕ. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆಗಿನಿಂದಲೂ ‘ಡಾನ್ 3’ಗಾಗಿ ಅಭಿಮಾನಿಗಳು ಕೇಳುತ್ತಿದ್ದರು. ಫರ್ಹಾನ್ ಕತೆ ರೆಡಿ ಇರಿಸಿಕೊಂಡು ಸಿನಿಮಾ ಪ್ರಾರಂಭಿಸಲು ಶುರು ಮಾಡಿದ್ದರು. ರಣ್ವೀರ್ ಸಿಂಗ್ ನಾಯಕ ಎನ್ನಲಾಯ್ತು. ಆದರೆ ರಣ್ವೀರ್ ಮತ್ತು ಫರ್ಹಾನ್ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಸಿನಿಮಾ ನಿಂತು ಹೋಗಿದೆ. ಇದೀಗ ಫರ್ಹಾನ್ ಅಖ್ತರ್ ‘ಡಾನ್ 3’ ಬಗ್ಗೆ ಮಾತನಾಡಿದ್ದಾರೆ.
ಹಾಲಿವುಡ್ ರಿಪೋರ್ಟರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಫರ್ಹಾನ್, ‘ಡಾನ್ 3’ ದೊಡ್ಡ ಪಾಠ ಕಲಿಸಿದೆ. ನಾನು ಕಲಿತ ಪಾಠವೆಂದರೆ ಅನಿರೀಕ್ಷಿತವಾದುದನ್ನು ನಿರೀಕ್ಷಿಸಬಾರದು ಎಂದು. ಯಾವುದೂ ಕೂಡ ಸಿನಿಮಾ ಆಗಿ ಪರದೆಯ ಮೇಲೆ ಬರುವವರೆಗೆ ಅದು ಖಚಿತ ಎಂದು ಭಾವಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಎದುರಾಗುವ ಇಂತಹ ಸವಾಲುಗಳನ್ನು ಸಾಮಾನ್ಯ ಎಂಬಂತೆ ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.
2023ರಲ್ಲಿ ‘ಡಾನ್ 3’ ಸಿನಿಮಾ ಘೋಷಿಸಲಾಯ್ತು. ಸಿನಿಮಾಕ್ಕೆ ಶಾರುಖ್ ಖಾನ್ ಬದಲಿಗೆ ರಣ್ವೀರ್ ಸಿಂಗ್ ನಾಯಕ ಎಂದೂ ಸಹ ಘೋಷಿಸಲಾಗಿತ್ತು. ‘ಧುರಂಧರ್ 2’ ಸಿನಿಮಾದ ಬಳಿಕ ‘ಡಾನ್ 3’ ಸಿನಿಮಾವನ್ನು ಫರ್ಹಾನ್ ಅಖ್ತರ್ ಶುರು ಮಾಡಬೇಕಿತ್ತು. ರಣ್ವೀರ್ ಕತೆ ಸಹ ಕೇಳಿದ್ದರು. ರಣ್ವೀರ್ ಅವರಿಗೆ ಅಡ್ವಾನ್ಸ್ ಸಹ ನೀಡಲಾಗಿತ್ತು. ಆದರೆ, ರಣವೀರ್ ಅವರ ಇತ್ತೀಚಿನ ಸಿನಿಮಾ ‘ಧುರಂಧರ್’ ಯಶಸ್ಸಿನ ನಂತರ, ಸ್ಕ್ರಿಪ್ಟ್ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಇದ್ದಕ್ಕಿದ್ದಂತೆ ಹೊರನಡೆದರು.
ಇದನ್ನೂ ಓದಿ:‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ
ರಣವೀರ್ ಅವರ ಈ ನಿರ್ಧಾರದಿಂದಾಗಿ ಫರ್ಹಾನ್ ಅವರ ಎಕ್ಸೆಲ್ ಎಂಟರ್ಟೈನ್‌ಮೆಂಟ್ ಸಂಸ್ಥೆಗೆ ಸುಮಾರು 40 ಕೋಟಿ ನಷ್ಟವಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ನಿರ್ಮಾಪಕರ ಸಂಘದ ಮೊರೆ ಕೂಡ ಹೋಗಲಾಗಿತ್ತು. ಬಳಿಕ ಸ್ಟಾರ್ ನಟ ಆಮಿರ್ ಖಾನ್ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವೆ ಸಂಧಾನ ಮಾಡಿದ್ದಾರೆ. ರಣವೀರ್ ಸಿಂಗ್ ಅವರು ಪಡೆದಿದ್ದ 10 ಕೋಟಿ ಮುಂಗಡ ಹಣವನ್ನು ಮರಳಿಸಿದ್ದಾರೆ. ಮತ್ತು ತಮ್ಮ ಮುಂದಿನ ಚಿತ್ರ ‘ಪ್ರಳಯ’ದಲ್ಲಿ ಪಾಲನ್ನು ನೀಡುವ ಮೂಲಕ ನಷ್ಟ ಭರಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ನಿರ್ಮಾಣ ಸಂಸ್ಥೆಯು ಈ ಬಗ್ಗೆ ಯಾವುದೇ ಅಧಿಕೃತ ಒಪ್ಪಂದ ನಡೆದಿಲ್ಲ ಎಂದಿದೆ.
ಸದ್ಯಕ್ಕೆ ‘ಡಾನ್ 3’ ಭವಿಷ್ಯ ಅನಿಶ್ಚಿತವಾಗಿದೆ. ಫರ್ಹಾನ್ ಅಖ್ತರ್ ಅವರೇ ಸ್ವತಃ ಡಾನ್ ಪಾತ್ರದಲ್ಲಿ ನಟಿಸುತ್ತಾರೆಯೇ ಅಥವಾ ಶಾರುಖ್ ಖಾನ್ ಅವರೇ ಮತ್ತೆ ಡಾನ್ ಪಾತ್ರದಲ್ಲಿ ನಟಿಸುತ್ತಾರಾ? ಅಥವಾ ಹೊಸ ನಟನನ್ನು ಹುಡುಕುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಫರ್ಹಾನ್ ಅಖ್ತರ್, ನಿರ್ದೇಶಕ ಆಗಿರುವ ಜೊತೆಗೆ ನಟ ಮತ್ತು ಸಂಗೀತಗಾರ ಸಹ ಆಗಿದ್ದಾರೆ. ಕಳೆದ ವರ್ಷ ಅವರ ನಟನೆಯ ‘120 ಬಹದ್ಧೂರ್’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಫರ್ಹಾನ್ ಖಾನ್ ಅವರು 2011 ರಲ್ಲಿ ಬಿಡುಗಡೆ ಆದ ‘ಡಾನ್ 3’ ಬಳಿಕ ಇನ್ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಆದರೆ ಈಗ ನಿರ್ದೇಶಕನಾಗಿ ಕಮ್ಬ್ಯಾಕ್ ಮಾಡುವ ಹೊತ್ತಲ್ಲೇ ಅವರಿಗೆ ಸಂಕಷ್ಟ ಎದುರಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Tue, 28 April 26