ನಟ, ನಿರ್ಮಾಪಕ ಹಾಗೂ ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ (Kamaal R. Khan) ಮಾಡಿಕೊಂಡ ಕಿರಿಕ್ಗಳು ಒಂದೆರಡಲ್ಲ. ಈ ಹಿಂದಿ ಮಾಡಿದ ವಿವಾದಗಳಿಗೆಲ್ಲ ಈಗ ಅವರು ಬೆಲೆ ತೆತ್ತುವಂತಾಗಿದೆ. ಅವರ ಒಂದೊಂದೇ ಕೇಸ್ಗಳು ಹೊರಬರುತ್ತಿವೆ. ಕೆಆರ್ಕೆ (KRK) ಎಂದೇ ಫೇಮಸ್ ಆಗಿರುವ ಅವರನ್ನು ಕೆಲವೇ ದಿನಗಳ ಹಿಂದೆ ಅರೆಸ್ಟ್ ಮಾಡಲಾಗಿತ್ತು. ಆಕ್ಷೇಪಾರ್ಹ ಟ್ವೀಟ್ ಮಾಡಿದ ತಪ್ಪಿಗೆ ಅವರನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಘಟನೆ ನಡೆದು ಒಂದು ವಾರ ಕಳೆಯುವುದರೊಳಗೆ ಕಮಾಲ್ ಆರ್. ಖಾನ್ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಮಹಿಳಾ ಜಿಮ್ ಟ್ರೇನರ್ಗೆ ಲೈಂಗಿಕ ಕಿರುಕುಳ (Molestation) ನೀಡಿದ ಆರೋಪದಲ್ಲಿ ಅವರನ್ನು ಮತ್ತೆ ಬಂಧಿಸಲಾಗಿದೆ. ಈ ಬಾರಿ ಅವರ ಮೇಲಿರುವ ಆರೋಪ ಗಂಭೀರವಾಗಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ, ಒಂದು ಪಾರ್ಟಿಯಲ್ಲಿ ಅವರಿಗೆ ಕಮಾಲ್ ಆರ್. ಖಾನ್ ಪರಿಚಯ ಆಯಿತು. ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡರು. ‘ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಕಮಾಲ್ ಆರ್. ಖಾನ್ ನನಗೆ ಭರವಸೆ ನೀಡಿದ್ದರು. ನಂತರ ಲೈಂಗಿಕ ಕಿರುಕುಳ ಆಗುವಂತಹ ಮೆಸೇಜ್ಗಳನ್ನು ಕಳಿಸಲು ಆರಂಭಿಸಿದರು. 2019ರಲ್ಲಿ ತಮ್ಮ ಬರ್ತ್ಡೇ ಪಾರ್ಟಿಗೆ ನನ್ನನ್ನು ಕರೆದರು. ಆದರೆ ನಾನು ಹೋಗಲಿಲ್ಲ. ಒಂದು ದಿನ ರೂಮ್ಗೆ ಕರೆದು ಜ್ಯೂಸ್ ನೀಡಿದರು. ಅದರಲ್ಲಿ ಏನೋ ಬೆರೆಸಿದ್ದರು. ನಂತರ ನನ್ನನ್ನು ಕೆಟ್ಟದಾಗಿ ಮುಟ್ಟಲು ಆರಂಭಿಸಿದರು. ನಾನು ಅಲ್ಲಿಂದ ಓಡಿಬಂದೆ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ನಡೆದಿದ್ದು ಬಹಳ ಹಿಂದೆ ಆದರೂ ಕೂಡ ತಕ್ಷಣಕ್ಕೆ ದೂರು ನೀಡಲು ಮಹಿಳೆಗೆ ಸಾಧ್ಯವಾಗಲಿಲ್ಲ. ‘ಚಿತ್ರರಂಗದಲ್ಲಿ ಕಮಾಲ್ ಆರ್. ಖಾನ್ ಅವರಿಗೆ ಹೆಚ್ಚು ಕನೆಕ್ಷನ್ ಇದೆ. ಆದ್ದರಿಂದ ದೂರು ನೀಡಲು ಭಯ ಆಯಿತು’ ಎಂದು ಅವರು ಹೇಳಿದ್ದಾರೆ. ಈ ಕೇಸ್ನ ವಿಚಾರಣೆ ಆರಂಭ ಆಗಿದ್ದು, ಕೆಆರ್ಕೆ ಮಾಡಿದ ಇನ್ನಷ್ಟು ಅವಾಂತರಗಳು ಹೊರಬರುವ ಸಾಧ್ಯತೆ ಇದೆ.
ನಟನಾಗಬೇಕು ಎಂಬುದು ಕಮಾಲ್ ಆರ್. ಖಾನ್ ಅವರ ಉದ್ದೇಶ ಆಗಿತ್ತು. ಆದರೆ ಚಿತ್ರರಂಗದಲ್ಲಿ ಅವರಿಗೆ ಸಕ್ಸಸ್ ಸಿಗಲಿಲ್ಲ. ಅವರೇ ನಿರ್ಮಿಸಿ, ನಟಿಸಿದ್ದ ‘ದೇಶದ್ರೋಹಿ’ ಸಿನಿಮಾ ಹೀನಾಯವಾಗಿ ಸೋತಿತು. ಬಳಿಕ ಬೇರೆಯವರ ಸಿನಿಮಾಗಳನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ಗೆ 10 ಲಕ್ಷಕ್ಕೂ ಅಧಿಕ subscribes ಇದ್ದಾರೆ. ಪದೇಪದೇ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುವ ಚಾಳಿ ಕಮಾಲ್ ಆರ್. ಖಾನ್ ಅವರಿಗೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:09 am, Tue, 6 September 22