Bollywood: ಶಿಲ್ಪಾ ಶೆಟ್ಟಿ, ಬಚ್ಚನ್, ಧೋನಿ ಹೆಸರು ಬಳಸಿ ಲಕ್ಷಾಂತರ ಹಣ ವಂಚನೆ
ಬಾಲಿವುಡ್ ಸಿನಿಮಾ ನಟ-ನಟಿಯರ ಹೆಸರು ಬಳಸಿ ಕೆಲವು ಯುವಕರು ಲಕ್ಷಾಂತರ ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಮಾಡಿದ್ದು ಹೇಗೆ? ಯಾರಿಗೆ?
ಬಾಲಿವುಡ್ ನಟ-ನಟಿಯರ ಹೆಸರುಗಳನ್ನು, ಚಿತ್ರಗಳನ್ನು ಜಾಹೀರಾತುಗಳಿಗೆ ಬಳಸುವುದು ಸಾಮಾನ್ಯ, ಆದರೆ ದೆಹಲಿಯ ಐನಾತಿ ಸೈಬರ್ ಕಳ್ಳರು ಬಾಲಿವುಡ್ (Bollywood) ನಟ-ನಟಿಯರ ಹೆಸರು, ಕೆಲವು ದಾಖಲಾತಿಗಳನ್ನು ಬಳಸಿ ಲಕ್ಷಾಂತರ ರುಪಾಯಿ ಹಣ ವಂಚನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಕೆಲವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ, ನಟ ಅಭಿಷೇಕ್ ಬಚ್ಚನ್, ಇಮ್ರಾನ್ ಹಶ್ಮಿ, ಮಾಧುರಿ ದೀಕ್ಷಿತ್, ಕ್ರಿಕೆಟಿಗ ಎಂಎಸ್ ಧೋನಿ ಇನ್ನೂ ಕೆಲವರ ಹೆಸರು ಅವರ ಪ್ಯಾನ್ ಕಾರ್ಡ್ ಹಾಗೂ ಇತರೆ ಕೆಲವು ದಾಖಲೆಗಳನ್ನು ಬಳಸಿ ಸಂಸ್ಥೆಯೊಂದರಿಂದ ಕ್ರೆಡಿಟ್ ಕಾರ್ಡ್ ಪಡೆದು ಲಕ್ಷಾಂತರ ಹಣ ವಂಚನೆ ಮಾಡಲಾಗಿದೆ.
ದೆಹಲಿಯ ಐವರು ಯುವಕರು ಈ ಜಾಲ ಹೆಣೆದಿದ್ದು, ಆನ್ಲೈನ್ನಲ್ಲಿ ಸಿಗುವ ಕ್ರಿಕೆಟಿಗರ ಹಾಗೂ ನಟ-ನಟಿಯರ ಪ್ಯಾನ್ ಕಾರ್ಡ್ ಸಂಖ್ಯೆ, ಜಿಎಸ್ಟಿ ದಾಖಲೆ ಹಾಗೂ ಮನೆ ವಿಳಾಸ ಇನ್ನಿತರೆಗಳನ್ನು ತೆಗೆದುಕೊಂಡು ಅದನ್ನು ಬಳಸಿ ಒನ್ ಕಾರ್ಡ್ ಹೆಸರಿನ ಆನ್ಲೈಸ್ ಕ್ರೆಡಿಟ್ ಕಾರ್ಡ್ ಸಂಸ್ಥೆಯ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದರು. ಆ ಕಾರ್ಡ್ಗಳನ್ನು ಬಳಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು.
ಸುಮಾರು 21.32 ಲಕ್ಷ ಮೌಲ್ಯದ ವಸ್ತುಗಳನ್ನು ಈ ಯುವಕರು ಖರೀದಿಸಿದ್ದರು ಎನ್ನಲಾಗಿದ್ದು. ಕ್ರೆಡಿಟ್ ಕಾರ್ಡ್ ಹಣ ಮರಳಿಸದೇ ಇದ್ದಾಗ ಪರಿಶೀಲನೆ ನಡೆಸಿದ ಸಂಸ್ಥೆಗೆ ಈ ಯುವಕರು ಸೆಲೆಬ್ರಿಟಿಗಳ ದಾಖಲೆ ನೀಡಿರುವುದು ಅರಿವಿಗೆ ಬಂದಿದೆ. ಕೂಡಲೇ ಪೊಲೀಸ್ ದೂರು ದಾಖಲಿಸಿದ್ದು, ತನಿಖೆ ನಡೆಸಿದ ದೆಹಲಿ ಪೊಲೀಸರು ಐವರು ಯುವಕರನ್ನು ಬಂಧಿಸಿದ್ದಾರೆ.
ಕ್ರೆಡಿಟ್ ಕಾರ್ಡ್ ಮಾರಾಟಕ್ಕೆ ಬ್ಯಾಂಕ್ಗಳು ಹಾಗೂ ಆನ್ಲೈನ್ ಫೈನ್ಯಾನ್ಸ್ ಸಂಸ್ಥೆಗಳ ನಡುವೆ ಪೈಪೋಟಿ ಇದ್ದು, ಒದ್ದಕ್ಕಿಂತಲೂ ಒಂದು ಸುಲಭವಾಗಿ, ಸರಳವಾಗಿ ಕನಿಷ್ಟ ಗ್ರಾಹಕರ ಮಾಹಿತಿ ಆಧರಿಸಿ ಕ್ರೆಡಿಟ್ ಕಾರ್ಡ್ ನೀಡುತ್ತಿವೆ. ಇದರ ಲಾಭ ಪಡೆದುಕೊಂಡ ಈ ಯುವಕರು ಸೆಲೆಬ್ರಿಟಿಗಳ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಪಡೆದು ಲಂಕ್ಷಾಂತರ ಹಣ ವಂಚಿಸಿದ್ದರು.
ಸಿನಿಮಾ ಸ್ಟಾರ್ಗಳ ಹೆಸರು ವಂಚನೆಗೆ ಬಳಕೆಯಾಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ನರೇಗಾ ಸ್ಕ್ರೀಂನಲ್ಲಿ ಕತ್ರಿನಾ ಕೈಫ್, ಕರೀನಾ ಕಪೂರ್, ಸನ್ನಿ ಲಿಯೋನ್ ಹೆಸರಲ್ಲಿ ಜಾಬ್ ಕಾರ್ಡ್ ಮಾಡಿ ಸರ್ಕಾರದಿಂದ ಹಣ ಪಡೆದ ಘಟನೆಗಳು ಮಧ್ಯ ಪ್ರದೇಶ, ಉತ್ತರ ಪ್ರದೇಶ ಇನ್ನಿತರೆಗಳಲ್ಲಿ ಬೆಳಕಿಗೆ ಬಂದಿದ್ದವು.