ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. 2023ರಲ್ಲಿ ಬಿಡುಗಡೆ ಆದ ‘ಗದರ್ 2’ (Gadar 2) ಸಿನಿಮಾದಿಂದ ಅವರ ಬೇಡಿಕೆ ಹೆಚ್ಚಾಗಿದೆ. ಆದರೆ ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಿರ್ಮಾಪಕ ಸೌರವ್ ಗುಪ್ತ ಅವರು ಸುದ್ದಿಗೋಷ್ಠಿ ನಡೆಸಿ ಶಾಕಿಂಗ್ ವಿಚಾರಗಳನ್ನು ಬಯಲು ಮಾಡಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಳಗಿರುವ ಸೌರವ್ ಗುಪ್ತಾ ಅವರು ಸಿನಿಮಾ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದ ಸನ್ನಿ ಡಿಯೋಲ್ ಮೋಸ (Cheating) ಮಾಡಿದ್ದಾರೆ ಎನ್ನಲಾಗಿದೆ.
2016ರಲ್ಲಿಯೇ ಸನ್ನಿ ಡಿಯೋಲ್ ಅವರಿಗೆ ಒಂದು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌರವ್ ಗುಪ್ತಾ ಅವರು 1 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದರು. ಆದರೆ ಈ ಸಿನಿಮಾ ಈವರೆಗೆ ಸೆಟ್ಟೇರಿಲ್ಲ. ‘ನಾವು ಅವರಿಗೆ 1 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದೆವು. ಆದರೆ ನಮ್ಮ ಸಿನಿಮಾ ಮಾಡುವ ಬದಲು ಅವರು ಬೇರೆ ಸಿನಿಮಾದಲ್ಲಿ ನಟಿಸಿದರು. ಅಲ್ಲದೇ ಪದೇ ಪದೇ ನನ್ನಿಂದ ಅವರು ಹೆಚ್ಚು ಹಣ ಕೇಳಿದರು. ಈತನಕ ನನ್ನಿಂದ 2.55 ಕೋಟಿ ರೂಪಾಯಿ ಹಣ ಸನ್ನಿ ಡಿಯೋಲ್ ಅವರ ಖಾತೆಗೆ ಹೋಗಿದೆ’ ಎಂದು ಸೌರವ್ ಗುಪ್ತಾ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಸನ್ನಿ ಡಿಯೋಲ್ ಅವರ ಮೇಲೆ ಫೋರ್ಜರಿ ಆರೋಪ ಕೂಡ ಎದುರಾಗಿದೆ. ‘ನಾವು ಒಪ್ಪಂದ ಪತ್ರ ಓದಿದಾಗ ಅವರು ಫೋರ್ಜರಿ ಮಾಡಿರುವುದು ತಿಳಿಯಿತು. 4 ಕೋಟಿ ರೂಪಾಯಿ ಸಂಭಾವನೆ ಬದಲಿಗೆ 8 ಕೋಟಿ ರೂಪಾಯಿ ಎಂದು ತಿದ್ದಿದ್ದರು’ ಎಂದಿದ್ದಾರೆ ಸೌರವ್ ಗುಪ್ತಾ. ಮತ್ತೋರ್ವ ನಿರ್ಮಾಪಕ ಸುನೀಲ್ ದರ್ಶನ್ ಕೂಡ ತಮಗೆ ಸನ್ನಿ ಡಿಯೋಲ್ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್ ನ್ಯೂಸ್
ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸನ್ನಿ ಡಿಯೋಲ್ ಅವರು ಹಲವು ವರ್ಷಗಳಿಂದ ಇಂಥ ವರ್ತನೆ ತೋರುತ್ತಾ ಬಂದಿದ್ದಾರೆ. ‘ರಾಮ ಜನ್ಮಭೂಮಿ’ ಎಂಬ ಸಿನಿಮಾದಲ್ಲಿ ನಟಿಸಲು ಅವರು 5 ಕೋಟಿ ರೂಪಾಯಿ ಸಂಭಾವನೆಗೆ ಸಹಿ ಮಾಡಿದ್ದರು. ಆದರೆ ‘ಗದರ್ 2’ ಸಿನಿಮಾ ಹಿಟ್ ಆದ ಬಳಿಕ ಅದೇ ‘ರಾಮ ಜನ್ಮಭೂಮಿ’ ಸಿನಿಮಾಗೆ 25 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಲು ಶುರು ಮಾಡಿದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.