‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ರಿಲೀಸ್ಗೆ ಇದ್ದ ಆತಂಕ ನಿವಾರಣೆ; ತೀರ್ಪು ನೀಡಿದ ಸುಪ್ರೀಂ ಕೋರ್ಟ್
ವ್ಯಕ್ತಿಯೊಬ್ಬರು ಈಗ ತಾನು ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿಕೊಂಡಿದ್ದರು.
ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ಸಿನಿಮಾಗಳು ವಿವಾದಕ್ಕೆ ಕಾರಣ ಆಗುವುದು ಹೊಸ ವಿಚಾರವೇನಲ್ಲ. ಈ ಹಿಂದೆ ಅವರು ನಿರ್ದೇಶನ ಮಾಡಿದ್ದ ಹಲವು ಚಿತ್ರಗಳು ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದವು. ಈಗ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಕೂಡ ಕೆಲವರಿಂದ ವಿರೋಧ ಎದುರಿಸುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾ ಫೆ.25ರಂದು ಬಿಡುಗಡೆ ಆಗಲಿದೆ. ಆದರೆ ಚಿತ್ರವನ್ನು ರಿಲೀಸ್ ಮಾಡಬಾರದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲಿಸಿದ್ದರು. ಈ ಪ್ರಕರಣದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ತೊಂದರೆ ಆಗಬಹುದು ಎಂಬ ಆತಂಕ ಎದುರಾಗಿತ್ತು. ಆದರೆ ರಿಲೀಸ್ಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ. ಹಾಗಾಗಿ, ಮೊದಲೇ ನಿಗದಿ ಆದಂತೆ ಶುಕ್ರವಾರ (ಫೆ.25) ಈ ಸಿನಿಮಾ ಬಿಡುಗಡೆ ಆಗಲಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್ (Alia Bhatt), ಅಜಯ್ ದೇವಗನ್, ಹುಮಾ ಖುರೇಷಿ, ವಿಜಯ್ ರಾಝ್ ಮುಂತಾದವರು ಅಭಿನಯಿಸಿದ್ದಾರೆ. ಅದ್ದೂರಿಯಾಗಿ ಈ ಚಿತ್ರ ಮೂಡಿಬಂದಿದ್ದು, ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಸೃಷ್ಟಿಸಿದೆ.
ಕಾಮಾಟಿಪುರದ ಲೇಡಿ ಡಾನ್ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ವ್ಯಕ್ತಿಯೊಬ್ಬರು ಈಗ ತಾನು ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡು ಬಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಸಿನಿಮಾದಲ್ಲಿ ಗಂಗೂಬಾಯಿಯ ವ್ಯಕ್ತಿತ್ವಕ್ಕೆ ಅವಮಾನ ಆಗುವಂತಹ ದೃಶ್ಯಗಳಿವೆ ಎಂದು ಆರೋಪಿಸಿದ್ದೂ ಅಲ್ಲದೇ, ರಿಲೀಸ್ಗೆ ತಡೆ ನೀಡಬೇಕು ಎಂದು ಕೋರ್ಟ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಕೋರ್ಟ್ ಸೂಚನೆ:
ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ‘ಗೋಲಿಯೋಂಕಿ ರಾಸ್ಲೀಲಾ ರಾಮ್ ಲೀಲಾ’, ‘ಪದ್ಮಾವತ್’ ಮುಂತಾದ ಸಿನಿಮಾಗಳು ಶೀರ್ಷಿಕೆ ವಿಚಾರದಲ್ಲಿ ಕಿರಿಕ್ ಮಾಡಿಕೊಂಡಿದ್ದವು. ಅದೇ ಪರಿಸ್ಥಿತಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೂ ಬಂದಿದೆ. ಈ ಚಿತ್ರದ ಟೈಟಲ್ ಬದಲಿಸಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದರು. ಆ ಸಂಬಂಧ ಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಈ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕ ಅಮಿನ್ ಪಟೇಲ್ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಕಾಮಾಠಿಪುರವನ್ನು ರೆಡ್ ಲೈಟ್ ಏರಿಯಾ ಎಂದು ತೋರಿಸಿರುವುದಲ್ಲದೇ ಕಾಠಿಯಾವಾಡಿ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬರಹಗಾರ ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕವನ್ನು ಆಧರಿಸಿ ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ತಯಾರಿಸಿದ್ದಾರೆ. ಆಲಿಯಾ ಭಟ್ ‘ಗಂಗೂಬಾಯಿ ಕಾಠಿಯಾವಾಡಿ’ಯಾಗಿ ಬಣ್ಣಹಚ್ಚಿದ್ದಾರೆ. ಯುವತಿಯೊಬ್ಬಳು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟವಾಗಿ ನಂತರ ಕಾಮಾಠಿಪುರದ ಡಾನ್ ಆಗುವ ಕಥೆಯನ್ನು ಈ ಸಿಮಾ ಒಳಗೊಂಡಿದೆ.
ಆಲಿಯಾ ನಟನೆಗೆ ಬನ್ಸಾಲಿ ಮೆಚ್ಚುಗೆ:
ಕೆಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಪ್ರದರ್ಶನ ಕಂಡಿದೆ. ಇತ್ತೀಚೆಗೆ ನಡೆದ 72ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ ಈ ಚಿತ್ರ ಪ್ರದರ್ಶನ ಆಯಿತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ಆಲಿಯಾ ಭಟ್ ಕೂಡ ಹಾಜರಿ ಹಾಕಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಲೀಲಾ ಬನ್ಸಾಲಿ ಅವರು ಕೆಲವು ಫನ್ನಿ ವಿಚಾರಗಳನ್ನು ಹಂಚಿಕೊಂಡಿದ್ದರು. ‘ಈ ಪಾತ್ರ ಮಾಡಿದ ಬಳಿಕ ರಿಯಲ್ ಲೈಫ್ನಲ್ಲಿಯೂ ಕೂಡ ಆಲಿಯಾ ಭಟ್ ಅವರು ಗಂಗೂಬಾಯಿ ರೀತಿ ಬದಲಾಗಿದ್ದಾರೆ ಅಂತ ನನಗೆ ಅನಿಸುತ್ತದೆ. ಮನೆಯಲ್ಲಿ ಕೂಡ ಅವರು ಗಂಗೂಬಾಯಿ ಥರ ಮಾತನಾಡುತ್ತಾರೆ ಅಂತ ಅವರ ಬಾಯ್ಫ್ರೆಂಡ್ (ರಣಬೀರ್ ಕಪೂರ್) ನನಗೆ ಕಂಪ್ಲೇಂಟ್ ಮಾಡಿದ್ದಾರೆ’ ಎಂದು ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದರು.
ಇದನ್ನೂ ಓದಿ:
ಬ್ರೇಕಪ್ಗಳ ರಾಜ ರಣಬೀರ್ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ
‘ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ಸುಟ್ಟು ಬೂದಿಯಾಗಲಿದೆ’; ಆಲಿಯಾ ಭಟ್ ಸಿನಿಮಾ ಬಗ್ಗೆ ಕಂಗನಾ ಟೀಕೆ