ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?

| Updated By: ರಾಜೇಶ್ ದುಗ್ಗುಮನೆ

Updated on: Oct 19, 2024 | 7:35 AM

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು.

ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?
ಸಲ್ಮಾನ್
Follow us on

ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ ನಂತರ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ಒದಗಿಸಲಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬಾಬಾ ಸಿದ್ಧಿಕಿಯ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಒಳ್ಳೆಯ ಗೆಳೆತನ ಹೊಂದಿದ ಕಾರಣಕ್ಕೆ ಈ ಕೊಲೆ ನಡೆದಿದೆ. ಇದರ ಬೆನ್ನಲ್ಲೇ, ಬಾಂದ್ರಾದಲ್ಲಿರುವ ಸಲ್ಮಾನ್ ಮತ್ತು ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಭದ್ರತೆಗಾಗಿ ವ್ಯಯಿಸಿರುವ ಹಣವೇ ಬೆಚ್ಚಿ ಬೀಳಿಸುವಂತಿದೆ.

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು. ಆ ಅಧಿಕಾರವನ್ನು ಸರ್ಕಾರ ಹೊಂದಿದೆ.

X ವರ್ಗದ ಭದ್ರತೆಗೆ ಓರ್ವ ಬಂದೂಕುಧಾರಿ ಮಾತ್ರ ಇರುತ್ತಾನೆ. Y ವರ್ಗದವರಿಗೆ ಇಬ್ಬರು ಬಂದೂಕುಧಾರಿಗಳು ಇರುತ್ತಾರೆ. Y+ ಅಂದರೆ ಸಲ್ಮಾನ್ ಖಾನ್​ಗೆ ನೀಡಿರುವ ಭದ್ರತೆಯ ಅಡಿಯಲ್ಲಿ 11 ಭದ್ರತಾ ಸಿಬ್ಬಂದಿ ಇರುತ್ತಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬರು ಮನೆಯ ಭದ್ರತೆಗಾಗಿ ಇರುತ್ತಾರೆ. ಸಲ್ಮಾನ್ ಖಾನ್​ ಎಲ್ಲೇ ಹೋದರೂ ಇಷ್ಟು ಮಂದಿ ಭದ್ರತೆಗೆ ಇರುತ್ತಾರೆ ಮತ್ತು ನಿತ್ಯವೂ ಆ ಭದ್ರತಾ ಸಿಬ್ಬಂದಿ ಬದಲಾಗುತ್ತಾ ಇರುತ್ತಾರೆ.

‘ಎಬಿಪಿ ಲೈವ್’ ವರದಿ ಪ್ರಕಾರ ಸಲ್ಮಾನ್ ಖಾನ್ ಭದ್ರತೆಯ ವೆಚ್ಚ ಕೋಟಿಗಟ್ಟಲೆ ಇದೆ. ವೈ ಪ್ಲಸ್ ಭದ್ರತೆಗೆ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಶೂಟಿಂಗ್ ನಡೆದಿತ್ತು. ಅಂದಿನಿಂದ, ಅದರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಇದನ್ನೂ ಓದಿ: ‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್​ಜಿವಿ

ಸಲ್ಮಾನ್ ಈ ಮೊದಲು ಭದ್ರತೆ ಬಗ್ಗೆ ಮಾತನಾಡಿದ್ದರು. ‘ಇನ್​ಸೆಕ್ಯೂರಿಟಿಗಿಂತ ಸೆಕ್ಯುರಿಟಿ ಉತ್ತಮ. ಭದ್ರತೆ ಇದೆ. ಈಗ ಮೊದಲಿನಂತೆ ಬೈಕ್ ರೈಡ್ ಮಾಡೋಕೆ ಆಗಲ್ಲ. ಬೇಕಾದಲ್ಲಿ ಹೊಗೋಕೆ ಆಗಲ್ಲ. ನಾನು ಟ್ರಾಫಿಕ್​ನಲ್ಲಿದ್ದಾಗ ಸಾಕಷ್ಟು ಭದ್ರತೆ ಇರುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಸಾಕಷ್ಟು ಬೆದರಿಕೆ ಇರುವುದರಿಂದ ಈ ರೀತಿಯ ಭದ್ರತೆ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Published On - 2:31 pm, Thu, 17 October 24