37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?

ಬಾಲಿವುಡ್ ನಟ ಗೋವಿಂದ ಹಾಗೂ ಸುನೀತಾ ಅಹುಜಾ ಅವರು ಮದುವೆ ಆಗಿ 37 ವರ್ಷ ಕಳೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಈಗ ಗೋವಿಂದ ಸಂಸಾರದಲ್ಲಿ ಬಿರುಕು ಮೂಡಿದಂತಿದೆ. ಸುನೀತಾ ಅವರು ವಿಚ್ಛೇದನಕ್ಕಾಗಿ ನೋಟಿಸ್ ಕಳಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
Govinda, Sunita Ahuja

Updated on: Feb 25, 2025 | 5:53 PM

ಬಾಲಿವುಡ್​ನ ಖ್ಯಾತ ನಟ ಗೋವಿಂದ ಅವರ ಸಂಸಾರದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಇವರಿಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಚ್ಚರಿ ಎಂದರೆ ಗೋವಿಂದ ಮತ್ತು ಸುನೀತಾ ಅವರು ಮದುವೆ ಆಗಿ 37 ವರ್ಷ ಕಳೆದಿದೆ. ಇಷ್ಟು ದಿನ ಅನ್ಯೋನ್ಯವಾಗಿ ಇದ್ದ ದಂಪತಿ ನಡುವೆ ಈಗ ಕಿರಿಕ್ ಶುರುವಾಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ ದಂಪತಿ ಕಡೆಯಿಂದ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸುನೀತಾ ಮತ್ತು ಗೋವಿಂದ ಅವರ ಜೀವನ ಶೈಲಿ ನಡುವೆ ಸಾಕಷ್ಟು ವ್ಯತ್ಯಾಸ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿ ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ನಡುವೆ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಗೋವಿಂದ ಅವರು ಮರಾಠಿ ನಟಿಯೊಬ್ಬರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಆ ಕಾರಣದಿಂದಲೇ ಸುನೀತಾ ಅವರು ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಹರಡಿದೆ.

ಈ ಮೊದಲು ನೀಡಿದ್ದ ಒಂದು ಸಂದರ್ಶನದಲ್ಲಿ ಸುನೀತಾ ಅವರು ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದರು. ‘ನಮಗೆ ಎರಡು ಮನೆ ಇದೆ. ನಮ್ಮ ಅಪಾರ್ಟ್​ಮೆಂಟ್​ ಎದುರು ನಮ್ಮದೇ ಒಂದು ಬಂಗಲೆ ಇದೆ. ನಾನು ಫ್ಲಾಟ್​ನಲ್ಲಿ ಮಕ್ಕಳ ಜೊತೆ ಇರುತ್ತೇನೆ. ಅವರು (ಗೋವಿಂದ) ಬಂಗಲೆಯಲ್ಲಿ ಇರುತ್ತಾರೆ. ಅವರ ಮೀಟಿಂಗ್ ಮುಗಿಯುವುದು ತಡ ಆಗುತ್ತದೆ. ಅವರಿಗೆ ಮಾತನಾಡುವುದು ಎಂದರೆ ತುಂಬ ಇಷ್ಟ. 10 ಜನರನ್ನು ಸೇರಿಸಿಕೊಂಡು ಮಾತನಾಡುತ್ತಾ ಇರುತ್ತಾರೆ’ ಎಂದು ಸುನೀತಾ ಅವರು ಹೇಳಿದ್ದರು.

ಇದನ್ನೂ ಓದಿ: ಗೋವಿಂದ ಹೇಳಿದ ಕಥೆ ನಂಬುತ್ತಿಲ್ಲ ಮುಂಬೈ ಪೊಲೀಸರು; ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್​

ಕೆಲವು ತಿಂಗಳ ಹಿಂದೆಯೇ ಸುನೀತಾ ಅವರು ಗೋವಿಂದಗೆ ಡಿವೋರ್ಸ್​ ನೋಟಿಸ್ ಕಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೆ ಇನ್ನೂ ಗೋವಿಂದ ಅವರು ಪ್ರತಿಕ್ರಿಯೆ ನೀಡಿದಂತಿಲ್ಲ. ಕುಟುಂಬದವರು ನೀಡಿದ ಕೆಲವು ಹೇಳಿಕೆಯಿಂದ ಸುನೀತಾ ಮತ್ತು ಗೋವಿಂದ ನಡುವೆ ಸಮಸ್ಯೆ ಉಂಟಾಗಿರುವುದು ನಿಜ ಎಂದು ಅವರ ಆಪ್ತ ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.

‘ಮುಂದಿನ ಜನ್ಮದಲ್ಲಿ ಅವರು ನನ್ನ ಗಂಡ ಆಗಬಾರದು. ಅವರಿಗೆ ಹೊರಗೆ ಹೋಗುವುದು ಎಂದರೆ ಇಷ್ಟ ಇಲ್ಲ. ನಾನು ಸುತ್ತಾಡಲು ಬಯಸುತ್ತೇನೆ. ಅವರು ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಾರೆ. ನಾವಿಬ್ಬರು ಜೊತೆಯಾಗಿ ಸಿನಿಮಾಗೆ ಹೋಗಿದ್ದೇ ನನಗೆ ನೆನಪಿಲ್ಲ’ ಎಂದು ಸುನೀತಾ ಅವರು ಈ ಮೊದಲಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.