‘ಹನುಮಾನ್ ಅಂಶ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಹೇಮಾ ಮಾಲಿನಿ ಸಂತಸ

‘ಹನುಮಾನ್ ಅಂಶ್’ ಸಿನಿಮಾದ ಹವಾ ಮುಂದುವರಿದಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಸೆಲೆಬ್ರಿಟಿಗಳಿಗೂ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಕಂಗನಾ ರಣಾವತ್, ವರುಣ್ ಧವನ್, ಮಧುರ್ ಭಂಡಾರ್ಕರ್, ಆದಿತ್ಯ ಧರ್ ಬಳಿಕ ನಟಿ ಹೇಮಾ ಮಾಲಿನಿ ಕೂಡ ‘ಹನುಮಾನ್ ಅಂಶ್’ ಚಿತ್ರವನ್ನು ಹೊಗಳಿದ್ದಾರೆ.

‘ಹನುಮಾನ್ ಅಂಶ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಹೇಮಾ ಮಾಲಿನಿ ಸಂತಸ
Hema Malini

Updated on: Sep 10, 2026 | 4:13 PM

ಆಧ್ಯಾತ್ಮಿಕ ತಪಸ್ವಿ ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘ಹನುಮಾನ್ ಅಂಶ್’ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸುತ್ತಿದ್ದು, ಹಿರಿಯ ನಟಿ ಹಾಗೂ ಮಥುರಾ ಸಂಸದೆ ಹೇಮಾ ಮಾಲಿನಿ ಅವರು ಚಿತ್ರದ ಯಶಸ್ಸಿಗೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಮಥುರಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೇಮಾ ಮಾಲಿನಿ, ‘ಇದು ಸಾಕ್ಷಾತ್ ಹನುಮಂತನ ಕೃಪೆಯ ಹೊರತು ಬೇರೇನೂ ಅಲ್ಲ’ ಎಂದು ಹೇಳಿದ್ದಾರೆ.

‘ಇಲ್ಲಿ ಹನುಮಾನ್ ಜಿ ಹಾಗೂ ನೀಮ್ ಕರೋಲಿ ಬಾಬಾ ಅವರ ಪ್ರಸಿದ್ಧ ದೇವಾಲಯವಿದೆ. ನಾನು ಸದಾ ಅಲ್ಲಿಗೆ ಭೇಟಿ ನೀಡುತ್ತೇನೆ. ಇಂದು ಅವರ ಜೀವನದ ಕುರಿತು ಸಿನಿಮಾ ರೂಪುಗೊಂಡು, ಅದು ಇಷ್ಟೊಂದು ದೊಡ್ಡ ಸೂಪರ್ ಹಿಟ್ ಆಗಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಇದು ಹನುಮಂತನ ಕೃಪೆ. ಈ ಚಿತ್ರವನ್ನು ನಿರ್ಮಿಸಿದ ಹುಡುಗಿ ಅತ್ಯಂತ ಸರಳ ವ್ಯಕ್ತಿ. ಅವರಿಗೆ ಸಿನಿಮಾ ನಿರ್ಮಾಣದ ದೊಡ್ಡ ಅನುಭವವೂ ಇರಲಿಲ್ಲ. ಆದರೆ ಅವರ ಶ್ರಮದಿಂದಾಗಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಇದನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ನಾನೂ ಕೂಡ ಶೀಘ್ರದಲ್ಲೇ ವೀಕ್ಷಿಸಲಿದ್ದೇನೆ’ ಎಂದು ಹೇಮಾ ಮಾಲಿನಿ ತಿಳಿಸಿದರು.

ವಿಶಾಲ್ ಚತುರ್ವೇದಿ ನಿರ್ದೇಶನದಲ್ಲಿ ಹಾಗೂ ಶೋಭಿನವ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಹನುಮಾನ್ ಅಂಶ್’ ಚಿತ್ರವು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಆರಂಭದಲ್ಲಿ ದಿನಕ್ಕೆ ಕೆಲವೇ ಲಕ್ಷ ರೂಪಾಯಿಗಳ ಗಳಿಕೆ ಕಾಣುತ್ತಿದ್ದ ಈ ಸಿನಿಮಾ, ಬಳಿಕ ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದ ಬಾಕ್ಸ್ ಆಫೀಸ್‌ನಲ್ಲಿ ಚೇತರಿಸಿಕೊಂಡು ಭರ್ಜರಿ ಗಳಿಕೆ ಮಾಡಿದೆ.

ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ. ಗಡಿ ದಾಟಿದ ಸಿನಿಮಾ:

ಪ್ರಸ್ತುತ ಭಾರತದಲ್ಲೇ ‘ಹನುಮಾನ್ ಅಂಶ್’ ಚಿತ್ರವು 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದು, ಸೆಪ್ಟೆಂಬರ್ 11ರಂದು ವಿದೇಶಗಳಲ್ಲೂ ಬಿಡುಗಡೆಯಾಗಲಿದೆ. ವಿದೇಶದ ಗಳಿಕೆ ಕೂಡ ಸೇರಿದರೆ ಸಿನಿಮಾದ ಕಲೆಕ್ಷನ್​ನಲ್ಲಿ ಹೊಸ ದಾಖಲೆ ಆಗಲಿದೆ. ‘ಟಾಕ್ಸಿಕ್’ ರೀತಿಯ ಬಿಗ್ ಬಜೆಟ್ ಚಿತ್ರಕ್ಕೆ ಕೂಡ ‘ಹನುಮಾನ್ ಅಂಶ್’ ಸಿನಿಮಾ ಕಠಿಣ ಪೈಪೋಟಿ ನೀಡಿದೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಒಂದು ದೈವಿಕ ಅನುಭವ: ಸೂಪರ್ ಹಿಟ್ ಚಿತ್ರಕ್ಕೆ ವರುಣ್ ಧವನ್ ಫಿದಾ

ಸೆಲೆಬ್ರಿಟಿಗಳಿಂದ ಪ್ರಶಂಸೆಗಳ ಮಹಾಮಳೆ:

ಬಾಲಿವುಡ್ ನಟ ವರುಣ್ ಧವನ್ ಅವರು ತಾಯಿಯೊಂದಿಗೆ ಈ ಚಿತ್ರವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದರು. ಜೊತೆಗೆ ಪ್ರೀತಿ ಜಿಂಟಾ, ಆದಿತ್ಯ ಧರ್, ಪ್ರೀತಿ ಜಿಂಟಾ, ಮಧುರ್ ಭಂಡಾರ್ಕರ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ನೀಮ್ ಕರೋಲಿ ಬಾಬಾ ಅವರ ಸರಳತೆಯ ಸಂದೇಶ ಸಾರುವ ಈ ಚಿತ್ರಕ್ಕೆ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us