‘ಹನುಮಾನ್ ಅಂಶ್’ ಸಿನಿಮಾಗೆ ಪ್ರೀತಿ ಜಿಂಟಾ ಮೆಚ್ಚುಗೆ: ತಪ್ಪದೇ ವೀಕ್ಷಿಸಿ ಎಂದು ಅಭಿಮಾನಿಗಳಿಗೆ ಕರೆ
‘ಹನುಮಾನ್ ಅಂಶ್’ ಸಿನಿಮಾದ ಬಗ್ಗೆ ಬಾಲಿವುಡ್‌ನ ಅನೇಕರು ಮಾತನಾಡುತ್ತಿದ್ದಾರೆ. ಪ್ರೀತಿ ಜಿಂಟಾ ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಅವರಿಗಿಂತ ಮುನ್ನ ‘ಧುರಂಧರ್’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರನ್ನು ಟ್ಯಾಗ್ ಮಾಡಿ ಅಭಿನಂದಿಸಿದ್ದರು.

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಸಿನಿಮಾ ಚಿತ್ರಮಂದಿರಗಳಲ್ಲಿ ಯಾವುದೇ ಸದ್ದಿಲ್ಲದೆ ಬಿಡುಗಡೆಯಾಗಿದ್ದರೂ, ಈಗ ವರ್ಷದ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರಕ್ಕೆ ಬಾಲಿವುಡ್ ತಾರೆಯರ ಬೆಂಬಲವೂ ಹರಿದುಬರುತ್ತಿದೆ. ವರುಣ್ ಧವನ್ ಮತ್ತು ಆದಿತ್ಯ ಧರ್ ಅವರ ನಂತರ ಇದೀಗ ನಟಿ ಪ್ರೀತಿ ಜಿಂಟಾ ಕೂಡ ಈ ಸಿನಿಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪ್ರೀತಿ ಜಿಂಟಾ ಅವರು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋಗೆ ‘ಸೀತಾ ರಾಮ್’ ಮತ್ತು ‘ವಾವ್’ ಎಂದು ಬರೆದುಕೊಂಡಿದ್ದರೆ, ಮತ್ತೊಂದು ಫೋಟೋದಲ್ಲಿ ‘ವೀಕ್ಷಕರು ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ, ಚಿತ್ರಮಂದಿರಗಳಲ್ಲೇ ವೀಕ್ಷಿಸಿ’ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಬಾಲಿವುಡ್ ನಟ ವರುಣ್ ಧವನ್ ಅವರು ‘ಹನುಮಾನ್ ಅಂಶ್’ ಸಿನಿಮಾವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ತಾವು ತಮ್ಮ ತಾಯಿಯೊಂದಿಗೆ ಈ ಸಿನಿಮಾ ವೀಕ್ಷಿಸಿದ್ದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, ‘ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ನಾನು ನನ್ನ ತಾಯಿಯೊಂದಿಗೆ ಹೋಗಿದ್ದೆ. ಅದೊಂದು ಅದ್ಭುತ ಅನುಭವ. ನಿಮ್ಮ ಪೋಷಕರು ಮತ್ತು ಸ್ನೇಹಿತರೊಂದಿಗೆ ಹೋಗಿ ವೀಕ್ಷಿಸಿ. ನನಗೆ ಯಾರೂ ಈ ವಿಡಿಯೋ ಮಾಡಲು ಹೇಳಿಲ್ಲ. ನಾನೇ ಸ್ವತಃ ಮಾಡುತ್ತಿದ್ದೇನೆ. ನನಗೆ ಬಾಲ್ಯದಿಂದಲೂ ಹನುಮಂತನ ಮೇಲೆ ಅಪಾರ ಭಕ್ತಿ ಇದೆ. ಆದರೆ ಈ ಸಿನಿಮಾ ನೀಡುವ ಅನುಭವವೇ ಬೇರೆ. ಇದೊಂದು ದೈವಿಕ ಅನುಭವ ನೀಡುವ ಚಿತ್ರ’ ಎಂದು ಪ್ರಶಂಸಿದ್ದಾರೆ.
ಅಲ್ಲದೆ ಚಿತ್ರದ ನಾಯಕ ನಟ ಶೋಭಿನವ್ ಸತ್ಯಾ ಮತ್ತು ನಿರ್ದೇಶಕ ವಿಶಾಲ್ ಅವರ ಕೆಲಸವನ್ನು ಮೆಚ್ಚಿದ ವರುಣ್, ‘ಶೋಭಿನವ್ ಅವರ ನಟನೆ ಅದ್ಭುತವಾಗಿದೆ. ವಿಶಾಲ್ ಅವರ ನಿರ್ದೇಶನಕ್ಕೆ ನನ್ನ ಸಲ್ಯೂಟ್’ ಎಂದಿದ್ದಾರೆ. ಅದೇ ರೀತಿ ನಟಿ ಕಂಗನಾ ರಣಾವತ್ ಅವರು ಈ ಸಿನಿಮಾವನ್ನು ಸತ್ಸಂಗ ಎಂದು ಹೊಗಳಿದ್ದಾರೆ. ‘ಹನುಮಾನ್ ಅಂಶ್’ ಚಿತ್ರವು ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.
ಇದನ್ನೂ ಓದಿ: ಚಪ್ಪಲಿ ಬಿಚ್ಚಿಟ್ಟು ‘ಹನುಮಾನ್ ಅಂಶ್’ ಸಿನಿಮಾ ನೋಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ವೈರಲ್
ಒಂದೆಡೆ ಬಾಲಿವುಡ್‌ನ ಪ್ರಮುಖರು ಸಿನಿಮಾವನ್ನು ಹೊಗಳುತ್ತಿದ್ದರೆ, ಇನ್ನೊಂದೆಡೆ ನಿರ್ದೇಶಕ ವಿಶಾಲ್ ಚತುರ್ವೇದಿ ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಚಿತ್ರ ನಿರ್ಮಾಣದ ವೇಳೆ ಚಿತ್ರರಂಗದವರು ತಮಗೆ ಸಹಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ಯಶಸ್ವಿಯಾದ ನಂತರ ಅನೇಕರು ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಆದರೆ ಸಿನಿಮಾ ಮಾಡುವಾಗ ನಾನು ಯಾರ ಬಳಿ ಸಹಾಯ ಕೇಳಿ ಅವರು ನಿರಾಕರಿಸಿದ್ದರೋ, ಅವರು ಈಗ ಕರೆ ಮಾಡಿದರೂ ಅವರ ಹೆಸರುಗಳನ್ನು ಹೇಳಲು ನಾನು ಬಯಸುವುದಿಲ್ಲ’ ಎಂದು ವಿಶಾಲ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




