ಹೋಳಿ ಹಬ್ಬದ ಬಗ್ಗೆ ಹೇಳಿಕೆ, ನಿರ್ದೇಶಕಿ ಫರ್ಹಾ ಖಾನ್ ವಿರುದ್ಧ ದೂರು
Farah Khan: ಬಾಲಿವುಡ್ನ ಖ್ಯಾತ ಕೊರಿಯೋಗ್ರಾಫರ್, ಸಿನಿಮಾ ನಿರ್ದೇಶಕಿ ಫರ್ಹಾ ಖಾನ್ ವಿರುದ್ಧ ಯೂಟ್ಯೂಬರ್ ಹಿಂದೂಸ್ಥಾನಿ ಬಾವ್ ಅಲಿಯಾಸ್ ವಿಕಾಸ್ ಫಾಠಕ್ ದೂರು ನೀಡಿದ್ದಾರೆ. ಫರ್ಹಾ ಖಾನ್, ರಿಯಾಲಿಟಿ ಶೋ ಒಂದರಲ್ಲಿ ಹಿಂದೂಗಳ ಹಬ್ಬವಾದ ಹೋಲಿ ಬಗ್ಗೆ ನೀಡಿದ ಹೇಳಿಕೆಯ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಬಾಲಿವುಡ್ನ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್, ಸಿನಿಮಾ ನಿರ್ದೇಶಕಿ, ರಿಯಾಲಿಟಿ ಶೋ ಜಡ್ಜ್ ಈಗ ವ್ಲಾಗರ್ ಸಹ ಆಗಿರುವ ಫರ್ಹಾ ಖಾನ್ ವಿರುದ್ಧ ಯೂಟ್ಯೂಬರ್ ಹಿಂದೂಸ್ಥಾನಿ ಬಾವ್ ಅಲಿಯಾಸ್ ವಿಕಾಸ್ ಫಾಠಕ್ ದೂರು ದಾಖಲು ಮಾಡಿದ್ದಾರೆ. ಫರ್ಹಾ ಖಾನ್, ಹಿಂದೂಗಳ ಹಬ್ಬವಾದ ಹೋಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಯೂಟ್ಯೂಬರ್ ಹಿಂದೂಸ್ಥಾನಿ ಬಾವ್ ಆರೋಪ ಮಾಡಿದ್ದಾರೆ.
ಮಾಸ್ಟರ್ ಶೆಫ್ ರಿಯಾಲಿಟಿ ಶೋ ಜಡ್ಜ್ ಆಗಿರುವ ಫರ್ಹಾ ಖಾನ್, ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಎಲ್ಲ ಕಿಡಿಗೇಡಿಗಳ (ಚಪ್ರಿ) ಬಹಳ ಮೆಚ್ಚಿನ ಹಬ್ಬವೆಂದರೆ ಅದು ಹೋಳಿ ಹಬ್ಬ’ ಎಂದಿದ್ದರು. ಹೋಳಿ ಹಬ್ಬದಲ್ಲಿ ತುಂಟರು ಯುವತಿಯರ ಮೇಲೆ ಬಣ್ಣ ಎಸೆಯುವುದು, ಅವರನ್ನು ಕಾಡಿಸುವುದು, ಹೋಲಿ ಹಬ್ಬದಂದು ಸಾರ್ವಜನಿಕವಾಗಿ ಮದ್ಯಪಾನ ಮಾಡುವುದು ಇತರೆಗಳನ್ನು ಮಾಡುವುದು ಹೆಚ್ಚು, ಇದನ್ನು ಗಮನದಲ್ಲಿಟ್ಟುಕೊಂಡು ಫರ್ಹಾ ಖಾನ್ ಹೀಗೆ ಹೇಳಿದ್ದರು.
ಆದರೆ ಯೂಟ್ಯೂಬರ್ ಹಿಂದೂಸ್ಥಾನಿ ಬಾವ್ ಫರ್ಹಾ ಖಾನ್ ಹೇಳಿಕೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಫರ್ಹಾ ಖಾನ್ ವಿರುದ್ಧ ಎಫ್ಐಆರ್ ದಾಖಲು ಮಾಡಿ ವಿಚಾರಣೆ ನಡೆಸಿ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಹಿಂದೂಸ್ಥಾನಿ ಬಾವ್ ಪರ ವಕೀಲ ಮಾತನಾಡಿ, ಫರಾ ಖಾನ್ ಅವರ ಹೇಳಿಕೆಯು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದೆ ಎಂದು ನನ್ನ ಕಕ್ಷಿದಾರರು ನಂಬುತ್ತಾರೆ. ಪವಿತ್ರ ಹಬ್ಬವನ್ನು ವಿವರಿಸಲು ‘ಚಪ್ರಿ’ (ಕಿಡಿಗೇಡಿಗಳು) ಎಂಬ ಪದವನ್ನು ಬಳಸುವುದು ಅತ್ಯಂತ ಅನುಚಿತವಾಗಿದೆ ಮತ್ತು ಕೋಮು ಅಶಾಂತಿಗೆ ಕಾರಣವಾಗಬಹುದು’ ಎಂದಿದ್ದಾರೆ.
ಇದನ್ನೂ ಓದಿ:‘ನಿನಗೆ ತಂದೆ ಇಲ್ಲ’: ತನ್ನ ಮಗುವಿಗೆ ಸತ್ಯ ತಿಳಿಸಿದ ಏಕ್ತಾ ಕಪೂರ್
ಇದೇ ಹಿಂದೂಸ್ಥಾನಿ ಬಾವ್, ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ದೂರು ದಾಖಲು ಮಾಡಿದ್ದರು. ಏಕ್ತಾ ಕಪೂರ್ ಸಹ ಒಡೆತನದ ಆಲ್ಟ್ ಬಾಲಾಜಿ ಒಟಿಟಿಯಲ್ಲಿನ ವೆಬ್ ಸರಣಿ ಒಂದರಲ್ಲಿ ಸೈನಿಕರನ್ನು ಅವಹೇಳನೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ವೆಬ್ ಸರಣಿಯಲ್ಲಿ ಸೈನಿಕನ ಪಾತ್ರಧಾರಿಯೋರ್ವ ಸಮವಸ್ತ್ರ ಧರಿಸಿ ಲೈಂಗಿಕತೆಗೆ ಇಳಿಯುತ್ತಾನೆ ಆ ದೃಶ್ಯದ ಬಗ್ಗೆ ಹಿಂದೂಸ್ಥಾನಿ ಬಾವ್ ಅಸಮಾಧಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದರು.
ಅಂದಹಾಗೆ ಈ ಹಿಂದೂಸ್ಥಾನಿ ಬಾವ್ ಯೂಟ್ಯೂಬರ್ ಆಗಿದ್ದು, ತಮ್ಮ ಕಾರಿನಲ್ಲಿ ಕೂತು ಅಶ್ಲೀಲವಾಗಿ ಜನರಿಗೆ ಬೈಯುತ್ತಾ ವಿಡಿಯೋ ಮಾಡುವುದರ ಮೂಲಕ ಇವರು ಜನಪ್ರಿಯ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Sat, 22 February 25