ಮತ್ತೆ ಕ್ರಿಶ್ ಮಾಸ್ಕ್ ತೊಡಲು ತಯಾರಾದ ಹೃತಿಕ್ ರೋಷನ್, ಇಷ್ಟು ತಡವಾಗಿದ್ದೇಕೆ?
Krish 4: ಭಾರತದ ಸೂಪರ್ ಹೀರೋ ಸಿನಿಮಾ ‘ಕ್ರಿಶ್’ ಸರಣಿಯ ಹೊಸ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಇದೀಗ ಹೊಸ ಸಿನಿಮಾ ಸೆಟ್ಟೇರುತ್ತಿದ್ದು, ಇಷ್ಟು ವರ್ಷ ತಡವಾಗಿದ್ದು ಏಕೆ? ವಿವರ ಇಲ್ಲಿದೆ.
ಹಾಲಿವುಡ್ನಲ್ಲಿ (Hollywood) ಹಲವು ಸೂಪರ್ಹೀರೋಗಳಿದ್ದಾರೆ. ಸೂಪರ್ಮ್ಯಾನ್, ಬ್ಯಾಟ್ಮ್ಯಾನ್, ಐರನ್ ಮ್ಯಾನ್, ಆಕ್ವಾಮ್ಯಾನ್, ಸ್ಪೈಡರ್ಮ್ಯಾನ್, ಆಂಟ್ಮ್ಯಾನ್, ಹಲ್ಕ್, ಕ್ಯಾಪ್ಟನ್ ಅಮೆರಿಕ ಇನ್ನೂ ಹಲವರಿದ್ದಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಹೀರೋ ಸಿನಿಮಾಗಳು ತುಸು ಕಡಿಮೆ. ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದ ‘ಶಕ್ತಿಮಾನ್’ ಹೊರತಾಗಿ ನೆನಪಾಗುವುದು ಕೇವಲ ‘ಕ್ರಿಶ್’ ಮಾತ್ರ. ಕೊನೆಯ ಕ್ರಿಶ್ ಸಿನಿಮಾ ಬಿಡುಗಡೆ ಆಗಿ ಈಗಾಗಲೇ 10 ವರ್ಷಕ್ಕೂ ಹೆಚ್ಚಾಗಿದೆ. ಇದೀಗ ‘ಕ್ರಿಶ್’ ಸಿನಿಮಾ ಸರಣಿಯನ್ನು ಮುಂದುವರೆಸಲು ನಟ ಹೃತಿಕ್ ರೋಷನ್ ತಯಾರಾಗಿದ್ದಾರೆ.
2003 ರಲ್ಲಿ ‘ಕೋಯಿ ಮಿಲ್ ಗಯಾ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದಾದ ಬಳಿಕ ಮೊದಲ ‘ಕ್ರಿಶ್’ ಸಿನಿಮಾ ಬಿಡುಗಡೆ ಆಗಿದ್ದು 2006 ರಲ್ಲಿ, ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಅದಾದ ಬಳಿಕ 2013ರಲ್ಲಿ ಕ್ರಿಶ್ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಯ್ತು. ಆ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಆ ಬಳಿಕ ಯಾವುದೇ ‘ಕ್ರಿಶ್’ ಸಿನಿಮಾ ಬಿಡುಗಡೆ ಆಗಲಿಲ್ಲ. ಆದರೆ ಈಗ ‘ಕ್ರಿಶ್ 4’ ಸಿನಿಮಾದ ಬಗ್ಗೆ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ:ಒಟಿಟಿಗೆ ಬಂತು ‘ಫೈಟರ್’ ಸಿನಿಮಾ; ಸಿಹಿ ಸುದ್ದಿ ನೀಡಿದ ಹೃತಿಕ್ ರೋಷನ್
‘ಕ್ರಿಶ್ 4’ ಸಿನಿಮಾ ನಿರ್ದೇಶಿಸಿ, ನಿರ್ಮಾಣ ಮಾಡಲು ಹೃತಿಕ್ ರೋಷನ್ರ ತಂದೆ ರಾಕೇಶ್ ರೋಷನ್ ರೆಡಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಅವರು ‘ಕ್ರಿಶ್ 4’ ಸಿನಿಮಾದ ಚಿತ್ರಕತೆ ಮೇಲೆ ಕೆಲಸ ಮಾಡುತ್ತಿದ್ದರಂತೆ. ಇದೀಗ ಚಿತ್ರಕತೆ ಅಂತಿಮವಾಗಿದ್ದು, ಚಿತ್ರೀಕರಣ ಪ್ರಾರಂಭಿಸಲು ತಯಾರಾಗಿದ್ದಾರೆ ಎನ್ನಲಾಗುತ್ತಿದೆ. ‘ನನಗೆ ಸೂಕ್ತ ಎನಿಸುವವರೆಗೆ ಸಿನಿಮಾ ಮಾಡಬಾರದು ಎಂದು ನಿರ್ಧರಿಸಿದ್ದೆ, ಹಾಗಾಗಿ ‘ಕ್ರಿಶ್ 4’ ತಡವಾಯ್ತು’ ಎಂದಿದ್ದಾರೆ.
‘ಕ್ರಿಶ್ 4’ ಸಿನಿಮಾದ ಚಿತ್ರೀಕರಣ 2025ರ ಆರಂಭದಿಂದ ಪ್ರಾರಂಭವಾಗಲಿದೆ. ಹೃತಿಕ್ ರೋಷನ್ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕವಷ್ಟೆ ‘ಕ್ರಿಶ್ 4’ ಸಿನಿಮಾ ಪ್ರಾರಂಭವಾಗಲಿದೆ. ಹೃತಿಕ್ ರೋಷನ್ ಪ್ರಸ್ತುತ ‘ವಾರ್ 2’ ಸಿನಿಮಾನಲ್ಲಿ ಜೂ ಎನ್ಟಿಆರ್ ಜೊತೆ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದಾದ ಬಳಿಕ ಮತ್ತೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕವಷ್ಟೆ ಅವರು ‘ಕ್ರಿಶ್ 4’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ