ಹಲವು ದಶಕಗಳಿಂದಲೂ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಮೇಲೆ ಹಿಡಿತ ಸಾಧಿಸಿದ್ದ ಬಾಲಿವುಡ್ (Bollywood) ಈಗ ಕೊಂಚ ಮಂಕಾಗಿದೆ. ಹಿಂದಿ ಸಿನಿಮಾಗಳಿಗಿಂತಲೂ ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳೇ ಹೆಚ್ಚು ಕಲೆಕ್ಷನ್ ಮಾಡುತ್ತಿವೆ. ಇದರಿಂದ ಸೌತ್ ಸಿನಿಮಾ ವರ್ಸಸ್ ಬಾಲಿವುಡ್ ಎಂಬ ಚರ್ಚೆ ಕೂಡ ಶುರುವಾಗಿದೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2), ‘ಆರ್ಆರ್ಆರ್’, ‘ಪುಷ್ಪ’ ಸಿನಿಮಾಗಳು ಮಾಡಿದ ಸಾಧನೆಯನ್ನು ಉತ್ತರ ಭಾರತದ ಮಂದಿ ಕೂಡ ಹೊಗಳಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್ ಜೋಹರ್ (Karan Johar) ಕೂಡ ‘ಕೆಜಿಎಫ್ 2’ ಸಿನಿಮಾವನ್ನು ಮೆಚ್ಚಿಕೊಂಡರು. ಆದರೆ ಈಗ ಅವರೊಂದು ಭಿನ್ನವಾದ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಬಾಲಿವುಡ್ನವರು ‘ಕೆಜಿಎಫ್’ ರೀತಿಯ ಸಿನಿಮಾ ಮಾಡಿದ್ದರೆ ಕಟುವಾದ ಟೀಕೆ ವ್ಯಕ್ತವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
‘ಫಿಲ್ಮ್ ಕಂಪ್ಯಾನಿಯನ್’ಗೆ ನೀಡಿದ ಸಂದರ್ಶನದಲ್ಲಿ ಕರಣ್ ಜೋಹರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಕೆಜಿಎಫ್ ಚಿತ್ರದ ವಿಮರ್ಶೆ ಓದಿದಾಗ, ಒಂದು ವೇಳೆ ನಾವು ಇಂಥ ಸಿನಿಮಾ ಮಾಡಿದ್ದರೆ ನಮ್ಮ ಮೇಲೆ (ವಿಮರ್ಶಕರಿಂದ) ಹಲ್ಲೆ ಆಗುತ್ತಿತ್ತು ಎನಿಸಿತು. ಆದರೆ ಈಗ ಇದೊಂದು ಸೆಲೆಬ್ರೇಷನ್ ಎಂಬ ರೀತಿ ಎಲ್ಲರೂ ಹೇಳಿದರು. ನನಗೂ ಸಿನಿಮಾ ಇಷ್ಟ ಆಯ್ತು. ಅದನ್ನೇ ನಾವು ಮಾಡಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಇದನ್ನೂ ಓದಿ: Top 10 Indian Movies: 2022ರ ಟಾಪ್ 10 ಭಾರತೀಯ ಚಿತ್ರಗಳಲ್ಲಿ ಸ್ಥಾನ ಪಡೆದ 7 ಸೌತ್ ಸಿನಿಮಾಗಳು; ನಂಬರ್ ಒನ್ ಯಾವುದು?
ಒಂದು ವೇಳೆ ಬಾಲಿವುಡ್ನವರು ‘ಕೆಜಿಎಫ್’ ರೀತಿಯ ಸಿನಿಮಾ ಮಾಡಿದ್ದರೆ ವಿಮರ್ಶಕರ ಕಟುವಾದ ಟೀಕೆಯಿಂದ ಸಿನಿಮಾ ಸೋಲುತ್ತಿತ್ತು. ಹಿಂದಿ ಚಿತ್ರರಂಗದವರಿಗೆ ವಿಮರ್ಶಕರು ಹೆಚ್ಚು ಸ್ವಾತಂತ್ರ್ಯ ನೀಡಿಲ್ಲ ಎಂಬುದು ಕರಣ್ ಜೋಹರ್ ಅವರ ಅಭಿಪ್ರಾಯ. ಅದನ್ನು ಅವರು ಈ ರೀತಿಯಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
‘ಕೆಜಿಎಫ್: ಚಾಪ್ಟರ್ 2’ ತಂಡದ ಜೊತೆ ಕರಣ್ ಜೋಹರ್ ಅವರು ತುಂಬ ಆತ್ಮೀಯತೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್ ಲಾಂಚ್ ಆದಾಗ ಕರಣ್ ಜೋಹರ್ ಅವರೇ ಬಂದು ನಿರೂಪಣೆ ಮಾಡಿದ್ದರು. ಸದ್ಯ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ 6 ವರ್ಷಗಳ ಬಳಿಕ ಕರಣ್ ಜೋಹರ್ ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 am, Sun, 19 June 22