
ಬಾಲಿವುಡ್‌ನ ಪ್ರಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಅವರ ಮಾವ ವಾಸು ಭಗ್ನಾನಿ ಅವರಿಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಮುಂಬೈನ ವಿವಿಧ ಭಾಗಗಳಲ್ಲಿರುವ ಇವರ ಆಸ್ತಿಪಾಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಪ್ರಸಿದ್ಧ ‘ಪನೋರಮಾ ಸ್ಟುಡಿಯೋಸ್’ ಮೇಲೆಯೂ ದಾಳಿಗಳು ನಡೆದಿವೆ. ಚಿತ್ರ ನಿರ್ಮಾಣದ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎನ್ನುವ ಅನುಮಾನದ ಮೇರೆಗೆ ಈ ದಾಳಿ ಮಾಡಲಾಗಿದೆ.
ವರದಿಗಳ ಪ್ರಕಾರ ಮುಂಬೈ ಆದಾಯ ತೆರಿಗೆ ಇಲಾಖೆಯು ಒಟ್ಟು 12 ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಮುಖವಾಗಿ ವಿದೇಶಗಳಿಗೆ ಅಕ್ರಮವಾಗಿ ಹಣ ರವಾನಿಸಿರುವ ಆರೋಪದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿತ್ರ ನಿರ್ಮಾಣದ ನೆಪದಲ್ಲಿ ವಿದೇಶಗಳಿಗೆ ತಲುಪಿರುವ ಹಣದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಮುಂಬೈನ ಹಲವು ತಂಡಗಳು ಈ ದಾಳಿಯಲ್ಲಿ ಭಾಗವಹಿಸಿವೆ. ಪ್ರಮುಖ ಹಣಕಾಸು ದಾಖಲೆಗಳು ಹಾಗೂ ವಹಿವಾಟಿನ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕುಮಾರ್ ಮಂಗತ್ ಪಾಠಕ್ ಒಡೆತನದ ‘ಪನೋರಮಾ ಸ್ಟುಡಿಯೋಸ್’ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಈ ಸಂಸ್ಥೆಯು ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಚಿತ್ರವನ್ನು ನಿರ್ಮಿಸಿದೆದೆ. ಈ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬರುತ್ತಿದೆ.
ರಕುಲ್ ಪ್ರೀತ್ ಸಿಂಗ್ ಕುಟುಂಬಕ್ಕೆ ಈ ರೀತಿಯ ತನಿಖೆ ಹೊಸದೇನಲ್ಲ. ಕಳೆದ ವರ್ಷ ರಕುಲ್ ಸಹೋದರ ಅಮನ್ ಪ್ರೀತ್ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಡ್ರಗ್ಸ್ ಜಾಲದ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಅವರ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ಬಾಲಿವುಡ್‌ನ ಮುಖವಾಡ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್: ಬಿಟೌನ್ ಮಂದಿಗೆ ಬರೀ ಅಸೂಯೆ
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ರಕುಲ್ ಪ್ರೀತ್ ಸಿಂಗ್ ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಾಸು ಭಗ್ನಾನಿ ಅವರ ‘ಪೂಜಾ ಫಿಲ್ಮ್ಸ್’ ಸಂಸ್ಥೆಯನ್ನು ಈಗ ಅವರ ಮಗ ಜಾಕಿ ಭಗ್ನಾನಿ ಮುನ್ನಡೆಸುತ್ತಿದ್ದಾರೆ. ಈ ಆದಾಯ ತೆರಿಗೆ ದಾಳಿಯು ಬಾಲಿವುಡ್ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.