ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ (Dharma Productions) ಕಳೆದ ವರ್ಷ ಕ್ರಿಕೆಟ್ ಕತಾ ವಸ್ತುವಿರುವ ಚಿತ್ರವೊಂದನ್ನು ಘೋಷಿಸಿತ್ತು. ಆ ಚಿತ್ರಕ್ಕೆ ಮಿಸ್ಟರ್ & ಮಿಸೆಸ್ ಮಹಿ (Mr and Mrs Mahi) ಎಂದು ಹೆಸರಿಡಲಾಗಿತ್ತು. ಬಾಲಿವುಡ್ನಲ್ಲಿ ಭರವಸೆ ಮೂಡಿಸುತ್ತಿರುವ ನಟಿ ಜಾಹ್ನವಿ ಕಪೂರ್ (Janhvi Kapoor) ನಾಯಕಿಯಾಗಿ ಹಾಗೂ ರಾಜ್ಕುಮಾರ್ ರಾವ್ ನಾಯಕನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನೂ ಘೋಷಿಸಲಾಗಿತ್ತು. ಇದೀಗ ಭಾರತ ಕ್ರಿಕೆಟ್ ತಾರೆ ದಿನೇಶ್ ಕಾರ್ತಿಕ್ (Dinesh Karthik) ಚಿತ್ರತಂಡ ಕೂಡಿಕೊಂಡಿದ್ದಾರೆ. ಅರೇ! ಅವರಿನ್ನೂ ವೃತ್ತಿಪರ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವಾಗ ಬಾಲಿವುಡ್ಗೂ ಕಾಲಿಟ್ಟರೇ ಎಂದು ಯೋಚಿಸಬೇಡಿ. ದಿನೇಶ್ ಚಿತ್ರತಂಡ ಸೇರಿಕೊಂಡಿದ್ದು ಕೋಚ್ ಆಗಿ. ಹೌದು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ದಿನೇಶ್ ಕಾರ್ತಿಕ್ ನಾಯಕಿ ಜಾಹ್ನವಿ ಕಪೂರ್ಗೆ ಕ್ರಿಕೆಟ್ ಹೇಳಿಕೊಡಲು ಕೋಚ್ ಆಗಿ ಆಗಮಿಸಿದ್ದಾರೆ. ಈ ಚಿತ್ರಗಳನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಜಾಹ್ನವಿ, ‘ಕ್ರಿಕೆಟ್ ಕ್ಯಾಂಪ್’ ಎಂದು ಶೀರ್ಷಿಕೆ ನೀಡಿದ್ದಾರೆ. ಇದರಲ್ಲಿ ದಿನೇಶ್ ಕಾರ್ತಿಕ್ ಹಾಗೂ ನಿರ್ದೇಶಕ ಶರಣ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಇವರಲ್ಲದೇ ಕ್ರಿಕೆಟಿಗರಾದ ಅಭಿಷೇಕ್ ನಾಯರ್, ವಿಕ್ರಾಂತ್ ಎಲಿಗತಿ ಮತ್ತು ಹಲವರು ತಂಡದಲ್ಲಿದ್ದಾರೆ.
ಜಾಹ್ನವಿ ಕಪೂರ್ ಹಂಚಿಕೊಂಡ ಚಿತ್ರಗಳು ಇಲ್ಲಿವೆ:
ಕಾಮೆಂಟ್ನಲ್ಲಿ ಹಲವು ಅಭಿಮಾನಿಗಳು ರಾಜ್ಕುಮಾರ್ ರಾವ್ ಎಲ್ಲಿ ಎಂದು ಕೇಳಿದ್ದಾರೆ. ಈ ಕುರಿತು ಜಾಹ್ನವಿ ಅಥವಾ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಮಿಸ್ಟರ್ & ಮಿಸಸ್ ಮಹಿ’ ಚಿತ್ರ ರಾಜ್ಕುಮಾರ್ ರಾವ್ ಹಾಗೂ ಜಾಹ್ನವಿ ಕಪೂರ್ ‘ರೂಹಿ’ ನಂತರ ಜತೆಯಾಗಿ ನಟಿಸುತ್ತಿರುವ ಚಿತ್ರ. ನಿರ್ದೇಶಕ ಶರಣ್ ಶರ್ಮಾ ಈಗಾಗಲೇ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಮೂಲಕ ಗುರುತಿಸಿಕೊಂಡಿದ್ದಾರೆ.
ಕಳೆದ ವರ್ಷ ಅನೌನ್ಸ್ ಆಗಿದ್ದ ಮಿಸ್ಟರ್ & ಮಿಸಸ್ ಮಹಿ:
ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಕಳೆದ ವರ್ಷ ಅನೌನ್ಸ್ ಆಗಿತ್ತು. ಚಿತ್ರವನ್ನು ಅನೌನ್ಸ್ ಮಾಡಿದ್ದ ಚಿತ್ರತಂಡ 2022ರ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ ಎಂದೂ ಹೇಳಿಕೊಂಡಿತ್ತು. ಕ್ರಿಕೆಟ್ ಕುರಿತ ಕತೆ ಇದಾಗಿರಲಿದ್ದು, ನಾಯಕ- ನಾಯಕಿ ಒಂದೇ ಗುರಿಯೆಡೆಗೆ ಸಾಗುವ ಪಯಣವನ್ನು ಚಿತ್ರ ಕಟ್ಟಿಕೊಡಲಿದೆ. ಜಾಹ್ನವಿ ಮಹಿಮಾ ಪಾತ್ರದಲ್ಲಿ ಹಾಗೂ ರಾಜ್ಕುಮಾರ್ ರಾವ್ ಮಹೇಂದ್ರ ಎಂಬ ಪಾತ್ರಗಳಲ್ಲಿ ಬಣ್ಣಹಚ್ಚಲಿದ್ದಾರೆ. ಈಗಾಗಲೇ ಚಿತ್ರತಂಡ ನಿರೀಕ್ಷೆ ಮೂಡಿಸಿದ್ದು, ಇದೀಗ ದಿನೇಶ್ ಕಾರ್ತಿಕ್ ಕಲಾವಿದರಿಗೆ ತರಬೇತಿ ನೀಡುತ್ತಿರುವುದು ಚಿತ್ರದ ಕುರಿತು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ವರ್ಷ ಜಾಹ್ನವಿ ಹಂಚಿಕೊಂಡಿದ್ದ ಪೋಸ್ಟ್:
ಈ ಚಿತ್ರದ ಹೊರತಾಗಿ ಜಾಹ್ನವಿ ಕಪೂರ್ ‘ಮಿಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರವನ್ನು ಅವರ ತಂದೆ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಥ್ರಿಲ್ಲರ್ ಚಿತ್ರ ಇದಾಗಿದ್ದು, ಚಿತ್ರೀಕರಣ ಮುಕ್ತಾಯಗೊಂಡಿದೆ. ಮಾತುಕುಟ್ಟಿ ಕ್ಸೇವಿಯರ್ ನಿರ್ದೇಶನ ಮಾಡುತ್ತಿದ್ದು, ಮಲಯಾಳಂನ ‘ಹೆಲೆನ್’ ಚಿತ್ರದ ರಿಮೇಕ್ ಇದಾಗಿದೆ.
ಇದನ್ನೂ ಓದಿ:
ಮಿನ್ನಲ್ ಮುರಳಿ ಚಿತ್ರದ ಹೀರೋನಂತೆ ರೆಡಿಯಾಗಿ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ವರ