ಬಾಲಿವುಡ್ನ ಖ್ಯಾತ ಗೀತರಚನಾಕಾರ, ಕವಿ ಜಾವೇದ್ ಅಖ್ತರ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಅವರು ನೀಡಿದ ಹೇಳಿಕೆಗಳು ಅವಹೇಳನಕಾರಿಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಬರೋಬ್ಬರಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಪ್ರತ್ಯೇಕ ಕೇಸ್ಗಳು ಅವರ ಮೇಲೆ ದಾಖಲಾಗಿದೆ. ಈ ಸಂಬಂಧ ಅವರಿಗೆ ಲೀಗಲ್ ನೋಟೀಸ್ ಕಳಿಸಲಾಗಿದೆ.
ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಜಾವೇದ್ ಅಖ್ತರ್ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಆರ್ಎಸ್ಎಸ್ ಕಾರ್ಯಕರ್ತರು ಖಂಡಿಸಿದ್ದಾರೆ. ಲಾಯರ್ ಸಂತೋಷ್ ದುಬೆ ಎಂಬುವವರು ಜಾವೇದ್ ಅಖ್ತರ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಲೀಗಲ್ ನೋಟೀಸ್ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಸಾರ್ವಜನಿಕವಾಗಿ ಜಾವೇದ್ ಅಖ್ತರ್ ಕ್ಷಮೆ ಕೇಳಬೇಕು ಮತ್ತು ತಮ್ಮ ಎಲ್ಲ ಹೇಳಿಕೆಗಳನ್ನು ವಾಪಸ್ ಪಡೆಯಬೇಕು ಎಂದು ಸಂತೋಷ್ ದುಬೆ ಪಟ್ಟು ಹಿಡಿದಿದ್ದಾರೆ.
ವಕೀಲರೂ ಆಗಿರುವ ಮತ್ತೋರ್ವ ಆರ್ಎಸ್ಎಸ್ ಕಾರ್ಯಕರ್ತ ದೃಷ್ಟಿಮಾನ್ ಜೋಶಿ ಅವರು ಕ್ರಿಮಿನಲ್ ದೂರು ನೀಡಿದ್ದಾರೆ. ‘ಸೆ.4ರಂದು ಜಾವೇದ್ ಅಖ್ತರ್ ಅವರು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಹಿಂದೂ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿದ್ದನ್ನು ನಾನು ಗಮನಿಸಿದ್ದೇನೆ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳ ಮಾನಹಾನಿ ಮಾಡುವ ಉದ್ದೇಶದಿಂದಲೇ ಜಾವೇದ್ ಅಖ್ತರ್ ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಆರ್ಎಸ್ಎಸ್ ಈ ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ ಅಂತ ಅವರು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ. ಆರ್ಎಸ್ಎಸ್ಗೆ ಸೇರುವವರನ್ನು ದಾರಿ ತಪ್ಪಿಸಲು ಇಂಥ ಹೇಳಿಕೆ ನೀಡಲಾಗಿದೆ’ ಎಂದು ದೂರಿನಲ್ಲಿ ಜೋಶಿ ಆರೋಪಿಸಿದ್ದಾರೆ.
‘ಯಾವುದೇ ಸಾಕ್ಷಿಗಳು ಇಲ್ಲದೇ ಆರ್ಎಸ್ಎಸ್ ಬಗ್ಗೆ ಜಾವೇದ್ ಅಖ್ತರ್ ಅವರು ಇಂಥ ಮಾತುಗಳನ್ನು ಆಡಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಕೇಂದ್ರದ ಅನೇಕ ಮಂತ್ರಿಗಳು ಆರ್ಎಸ್ಎಸ್ ಬೆಂಬಲಿಗರಾಗಿದ್ದಾರೆ. ಅಂಥ ಸಂಘಟನೆ ಬಗ್ಗೆ ಜಾವೇದ್ ಅಖ್ತರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ದೃಷ್ಟಿಮಾನ್ ಜೋಶಿ ಹೇಳಿದ್ದಾರೆ. ಅ.30ರಂದು ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:
‘ಕತ್ತೆಕಿರುಬಗಳನ್ನು ಎದುರಿಸುತ್ತಿರುವ ಒಂಟಿ ಸಿಂಹ’; ಕೋರ್ಟ್ ಮೆಟ್ಟಿಲು ಹತ್ತಿಬಂದರೂ ಕಂಗನಾ ಸಿನಿಮೀಯ ಡೈಲಾಗ್