
ಹಿರಿಯ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ಅವರು ಓರ್ವ ನಾಸ್ತಿಕ (Atheist) ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದರೆ, ಜಾವೇದ್ ಅಖ್ತರ್ ಅವರು ದೇವರ ಮೇಲೆ ನಂಬಿಕೆ ಹೊಂದಿಲ್ಲ. ದೇವರ ಅಸ್ತಿತ್ವವನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಟೋಪಿ ಧರಿಸಿ ನಮಾಜ್ ಕೂಡ ಮಾಡಲು ಆರಂಭಿಸಿದ್ದಾರೆ ಎಂದು ಅಂತೆ-ಕಂತೆ ಹಬ್ಬಿಸಲಾಗಿದೆ. ಅದರ ವಿರುದ್ಧ ಜಾವೇದ್ ಅಖ್ತರ್ (Javed Akhtar) ಗರಂ ಆಗಿದ್ದಾರೆ.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಾವೇದ್ ಅಖ್ತರ್ ಅವರು ಒಂದು ವಿಡಿಯೋ ಲಿಂಕ್ ಹಂಚಿಕೊಂಡಿದ್ದಾರೆ. ತಲೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿರುವ ಚಿತ್ರ ಇದರಲ್ಲಿ ಇದೆ. ‘ಜಾವೇದ್ ಅಖ್ತರ್ ಅವರು ಪೂರ್ತಿಯಾಗಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಅಲ್ಲಾ ಇರುವುದನ್ನು ಒಪ್ಪಿಕೊಂಡು, ತಲೆ ಮೇಲೆ ಟೋಪಿ ಹಾಕಿಕೊಂಡು, ನಮಾಜ್ ಮಾಡಲು ಮಸೀದಿಗೆ ಹೋಗಿದ್ದಾರೆ. ಅವರೀಗ ಪಕ್ಕಾ ಮುಸಲ್ಮಾನ ಆಗಿದ್ದಾರೆ’ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಈ ವದಂತಿಯ ವಿರುದ್ಧ ಜಾವೇದ್ ಅಖ್ತರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಎಐ ಫೋಟೋ ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ವಿಡಿಯೋ ಫಾರ್ವರ್ಡ್ ಮಾಡಿದವರಿಗೂ ಕಾನೂನಿನ ಮೂಲಕ ಪಾಠ ಕಲಿಸುವುದಾಗಿ ಜಾವೇದ್ ಅಖ್ತರ್ ಅವರು ಎಚ್ಚರಿಕೆ ನೀಡಿದ್ದಾರೆ.
A fake video is in circulation showing my fake computer generated picture with a topi on my head claiming that ultimately I have turned to God . It is rubbish . I am seriously considering to report this to the cyber police and ultimately dragged the person responsible for this…
— Javed Akhtar (@Javedakhtarjadu) January 1, 2026
‘ನಾನು ಟೋಪಿ ಧರಿಸಿರುವ ನಕಲಿ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ದೇವರನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ. ಇದೆಲ್ಲ ಸುಳ್ಳು. ಸೈಬರ್ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸುತ್ತಿದ್ದೇನೆ. ಈ ಸುಳ್ಳು ಸುದ್ದಿಗೆ ಕಾರಣ ಆದ ವ್ಯಕ್ತಿಯನ್ನು ಹಿಡಿಯುತ್ತೇವೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ’ ಎಂದು ಜಾವೇದ್ ಅಖ್ತರ್ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮೊಬೈಲ್ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಂಗಿಲ್ಲ, ವಿದ್ಯಾರ್ಥಿಗಳ ಫೋನ್ ಪುಡಿ ಪುಡಿ ಮಾಡಿದ ಮದರಸ ಗುರು
ಕೆಲವೇ ದಿನಗಳ ಹಿಂದೆ ‘ದೇವರು ಇದ್ದಾನಾ’ ಎಂಬ ವಿಷಯದ ಮೇಲೆ ಜಾವೇದ್ ಅಖ್ತರ್ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆ ಚರ್ಚೆಯ ವಿಡಿಯೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಈ ರೀತಿಯ ಫೇಕ್ ನ್ಯೂಸ್ ಹಬ್ಬಿದ್ದು, ಜಾವೇದ್ ಅಖ್ತರ್ ಅವರು ಗುಡುಗಿದ್ದಾರೆ. ಎಐ ಮೂಲಕ ಜಾವೇದ್ ಅಖ್ತರ್ ಅವರ ಫೇಕ್ ಫೋಟೋವನ್ನು ಕ್ರಿಯೇಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.