ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು, ನಿನ್ನೆಯಷ್ಟೆ (ಆಗಸ್ಟ್ 31) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಸಖತ್ ಮಾಸ್ ಆಗಿದ್ದು, ಶಾರುಖ್ ಖಾನ್ ಹಿಂದೆಂದೂ ಕಾಣದಷ್ಟು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ದೃಶ್ಯಗಳು, ಬೃಹ್ ಸೆಟ್ಗಳು ಇವೆಲ್ಲದರ ಜೊತೆಗೆ ಟ್ರೈಲರ್ನಲ್ಲಿ ಕೇಳಿ ಬರುವ ಸಣ್ಣ ಸಂಭಾಷಣೆಯೊಂದು ಬಹುವಾಗಿ ಗಮನ ಸೆಳೆದಿದೆ. ಆ ಡೈಲಾಗ್ ಅನ್ನು ಮಾಜಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ನೀಡಿರುವ ಪರೋಕ್ಷ ಎಚ್ಚರಿಕೆ ಎಂದು ಶಾರುಖ್ ಅಭಿಮಾನಿಗಳು ಹೇಳುತ್ತಿದ್ದಾರೆ.
ಟ್ರೈಲರ್ನಲ್ಲಿ, ‘ನನ್ನ ಮಗನ ಮೇಲೆ ಕೈ ಇಡೋ ಮುನ್ನ ಅಪ್ಪನೊಂದಿಗೆ ಮಾತನಾಡು’ ಎಂಬ ಡೈಲಾಗ್ ಇದೆ. ಈ ಡೈಲಾಗ್ ಶಾರುಖ್ ಖಾನ್ ಧ್ವನಿಯಲ್ಲಿದ್ದು, ಈ ಸಂಭಾಷಣೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಪರೋಕ್ಷವಾಗಿ ಶಾರುಖ್ ಖಾನ್ ನೀಡಿರುವ ಟಾಂಗ್ ಎಂದೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
‘ಜವಾನ್’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಆಗ ಮುಂಬೈ ಎನ್ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿ ಆಗಿದ್ದ ಸಮೀರ್ ವಾಂಖೆಡೆ ಹಾಗೂ ಅವರ ತಂಡ ಬಂಧಿಸಿತ್ತು. ಆ ಪ್ರಕರಣ ಭಾರತ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಸುದ್ದಿಯಾಗಿತ್ತು. ಆದರೆ ತನಿಖೆ ಮುಂದುವರೆದಂತೆ ಎನ್ಸಿಬಿ ಹಲವು ನಿಯಮಗಳನ್ನು ಗಾಳಿಗೆ ತೂರಿ, ಉದ್ದೇಶಪೂರ್ವಕವಾಗಿ ಆರ್ಯನ್ ಅನ್ನು ಬಂಧಿಸಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆರ್ಯನ್ ಬಂಧನ ಪ್ರಕರಣದಲ್ಲಿ ಹಲವು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಕ್ಕೆ ಸಾಕ್ಷಿಯಾಗಿ ಕೆಲವು ಚಿತ್ರ ಹಾಗೂ ವಿಡಿಯೋಗಳು ಸಹ ಹೊರಬಂದಿದ್ದವು.
ಇದನ್ನೂ ಓದಿ:‘ಜವಾನ್’ ಸಿನಿಮಾ ಆಡಿಯೋ ಲಾಂಚ್ಗೆ ಬರಲೇ ಇಲ್ಲ ನಯನತಾರಾ; ಅಸಲಿ ಕಾರಣ ಹುಡುಕಿದ ಫ್ಯಾನ್ಸ್
ಆರ್ಯನ್ ಬಂಧನದಲ್ಲಿ ಭಾಗಿಯಾಗಿದ್ದ ಖಾಸಗಿ ವ್ಯಕ್ತಿಯೊಬ್ಬ ಎನ್ಸಿಬಿ ಪರವಾಗಿ ಶಾರುಖ್ ಖಾನ್ರ ಮ್ಯಾನೇಜರ್ ಇಂದ ಲಕ್ಷಾಂತರ ಮೊತ್ತದ ಹಣವನ್ನು ಸ್ವೀಕರಿಸಿದ್ದು ಸಹ ಬಹಿರಂಗವಾಯ್ತು. ಅಲ್ಲದೆ ಆರ್ಯನ್ ಬಂಧನ ವೇಳೆ ಎನ್ಸಿಬಿ ಅಧಿಕಾರಿಗಳು ಹಲವು ನಿಯಮಗಳನ್ನು ಗಾಳಿಗೆ ತೂರಿದ್ದ ವಿಷಯ ನಂತರ ಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಪ್ರಕರಣ ಗಂಭೀರತೆ ಪಡೆದುಕೊಂಡಂತೆ ಕೇಂದ್ರ ಎನ್ಸಿಬಿಯು ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಿ, ಸಮೀರ್ ವಾಂಖೆಡೆಗೆ ವರ್ಗಾವಣೆ ಶಿಕ್ಷೆ ವಿಧಿಸಿತು.
ಈಗ ‘ಜವಾನ್’ ಸಿನಿಮಾದಲ್ಲಿ ‘ನನ್ನ ಮಗನ ಮೇಲೆ ಕೈ ಇಡೋ ಮುನ್ನ ಅಪ್ಪನೊಂದಿಗೆ ಮಾತನಾಡು’ ಎಂಬ ಸಂಭಾಷಣೆಯನ್ನು ಸಮೀರ್ ವಾಂಖೆಡೆಗೆ ಶಾರುಖ್ ಖಾನ್ ನೀಡಿರುವ ಪರೋಕ್ಷ ಎಚ್ಚರಿಕೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿರುವಾಗಲೇ, ಸಮೀರ್ ವಾಂಖಡೆ ಸಹ ಟ್ವೀಟರ್ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ. ‘ನಾನು ಬೆಂಕಿಯನ್ನು ನೆಕ್ಕಿದ್ದೇನೆ, ನಾನು ಸುಟ್ಟ ಪ್ರತಿ ಸೇತುವೆಯ ಬೂದಿಯಲ್ಲಿ ನರ್ತಿಸಿದ್ದೇನೆ. ನರಕದ ಭಯ ನನಗೆ ಇಲ್ಲ’ ಎಂಬ ನಿಕೋಲಸ್ ಲಯೋನ್ನ ಕೋಟ್ ಒಂದನ್ನು ಹಂಚಿಕೊಂಡಿದ್ದು, ಈ ಕೋಟ್ ನನಗೆ ಸದಾ ಸ್ಪೂರ್ತಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Fri, 1 September 23