ಅಮಿತಾಭ್ ಬಚ್ಚನ್ ನಟಿಸಿರುವ ‘ಝುಂಡ್’ (Jhund) ಇತ್ತೀಚೆಗೆ ತೆರೆ ಕಂಡಿದ್ದು, ಅದರ ನಿರ್ಮಾಪಕರಲ್ಲಿ ಒಬ್ಬರಾದ ಸವಿತಾ ರಾಜ್ ಹಿರೇಮಠ್ ತೆರಿಗೆ ವಿನಾಯಿತಿ ನೀಡುವ ಮಾನದಂಡದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಚಲನಚಿತ್ರವನ್ನು ಏಕೆ ತೆರಿಗೆ ಮುಕ್ತವಾಗಿ ಮಾಡಲಿಲ್ಲ ಎಂದು ಪ್ರಶ್ನಿಸಿರುವ ಅವರು, ಇದರಿಂದ ‘ಆಘಾತವಾಗಿದೆ’ ಎಂದು ಹೇಳಿದ್ದಾರೆ. ‘ಝುಂಡ್’ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ದೇಶದ ಅಭಿವೃದ್ಧಿಗೆ ಮುಖ್ಯವಾದ ವಿಷಯವನ್ನು ಇದು ಹೊಂದಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿರುವ ‘ದಿ ಕಾಶ್ಮೀರ್ ಫೈಲ್ಸ್’ಗೆ (The Kashmir Files) ದೇಶದ ಹಲವೆಡೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರ ಬೆನ್ನಲ್ಲೇ ‘ಝುಂಡ್’ ನಿರ್ಮಾಪಕರ ಹೇಳಿಕೆಗಳು ಬಂದಿವೆ. ತೆರಿಗೆ ವಿನಾಯಿತಿ ನೀಡಲು ಅನುಸರಿಸುವ ಬಗ್ಗೆ ಇರುವ ಗೊಂದಲ ಹಾಗೂ ಸ್ಪಷ್ಟತೆಯ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.
ಸವಿತಾ ರಾಜ್ ಹಿರೇಮಠ್ ಹಂಚಿಕೊಂಡ ಪೋಸ್ಟ್ನಲ್ಲೇನಿದೆ?
ಶುಕ್ರವಾರ, ಸವಿತಾ ಹಿರೇಮಠ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ‘‘ದಿ ಕಾಶ್ಮೀರ್ ಫೈಲ್ಸ್ ಅತ್ಯುತ್ತಮ ಚಿತ್ರ. ಆದರೆ ಝುಂಡ್ ಕೂಡ ವಿಷಯ ವಸ್ತುವಿನಿಂದ ಕಡಿಮೆ ಇಲ್ಲ. ನಾನು ಇತ್ತೀಚೆಗೆ ದಿ ಕಾಶ್ಮೀರ್ ಪೈಲ್ಸ್ ವೀಕ್ಷಿಸಿದ್ದೇನೆ ಮತ್ತು ಕಾಶ್ಮೀರಿ ಪಂಡಿತರ ವಲಸೆಯ ಕಥೆ ಹೃದಯವಿದ್ರಾವಕವಾಗಿದೆ ಮತ್ತು ಅದು ಜನರಿಗೆ ಹೇಳಲೇ ಬೇಕಾದ ಕತೆ. ಆದರೆ ‘ಝುಂಡ್’ ನಿರ್ಮಾಪಕನಾಗಿ ನನಗೆ ಆಘಾತವಾಗಿದೆ. ಕಾರಣ, ‘ಝುಂಡ್’ ಕೂಡ ಉತ್ತಮ ಕತೆಯನ್ನು ಹೊಂದಿದ್ದು, ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜತೆಗೆ ದೊಡ್ಡ ಸಂದೇಶವೂ ಚಿತ್ರದಲ್ಲಿದೆ’’ ಎಂದು ಅವರು ಹೇಳಿದ್ದಾರೆ.
‘ಝುಂಡ್’ ಮಾರ್ಚ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ, ಸ್ಲಂ ಫುಟ್‌ಬಾಲ್ ಚಳವಳಿಯನ್ನು ಹುಟ್ಟುಹಾಕಿದ ನಾಗಪುರದ ನಿವೃತ್ತ ನಾಟಕ ಶಿಕ್ಷಕ ವಿಜಯ್ ಬರ್ಸೆ ಕತೆಯನ್ನು ಚಿತ್ರ ಹೊಂದಿದೆ.
1990ರ ದಶಕದಲ್ಲಿ ಕಾಶ್ಮೀರಿ ಕಣಿವೆಯಿಂದ ಪಂಡಿತರ ವಲಸೆಯನ್ನು ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ‘ಝುಂಡ್’ ಚಿತ್ರ ರಿಲೀಸ್ ಆದ ಒಂದು ವಾರದ ಬಳಿಕ ತೆರೆಕಂಡಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಹಲವಾರು ನಾಯಕರು ಸೇರಿದಂತೆ ಕೇಂದ್ರ ಸರ್ಕಾರದಿಂದ ‘ದಿ ಕಾಶ್ಮೀರ್ ಫೈಲ್ಸ್’ಗೆ ದೊಡ್ಡ ಬೆಂಬಲ ಸಿಕ್ಕಿತು. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮೊದಲಾದವರು ನಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ, ಹರಿಯಾಣ, ಕರ್ನಾಟಕ, ತ್ರಿಪುರಾ ಮತ್ತು ಗೋವಾ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದಿದೆ.
ಮನರಂಜನಾ ತೆರಿಗೆಯಿಂದ ವಿನಾಯಿತಿ ಪಡೆಯಲು ಒಂದು ಚಿತ್ರವು ಯಾವ ಮಾನದಂಡಗಳನ್ನು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದೆ ಎಂದು ಸವಿತಾ ರಾಜ್ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ. ‘‘ಸರ್ಕಾರವು ತೆರಿಗೆ ವಿನಾಯಿತಿ ನೀಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವುದು, ಚಿತ್ರ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ನೀಡುವುದು ಮೊದಲಾದವುಗಳಿಗೆ ಮಾನದಂಡಗಳೇನು ಎಂಬುದನ್ನು ತಿಳಿಯಲು ಬಯಸುತ್ತೇನೆ’’ ಎಂದಿದ್ದಾರೆ ಸವಿತಾ ರಾಜ್.
‘ಝುಂಡ್’ ಕೇವಲ ಜಾತಿ ಮತ್ತು ಆರ್ಥಿಕ ಅಸಮಾನತೆಯ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಸಮಾಜದ ಕೆಳಸ್ತರದಲ್ಲಿರುವವರು ಯಶಸ್ವಿ ಬದುಕನ್ನು ಕಂಡುಕೊಳ್ಳುವ ಪ್ರೇರಣಾದಾಯಿ ಕತೆಯನ್ನು ಚಿತ್ರ ಒಳಗೊಂಡಿದೆ ಎಂದಿದ್ದಾರೆ ಸವಿತಾ ರಾಜ್.
ಸವಿತಾ ರಾಜ್ ಹಿರೇಮಠ್ ಪೋಸ್ಟ್ ಇಲ್ಲಿದೆ:
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’:
‘ದಿ ಕಾಶ್ಮೀರ್ ಫೈಲ್ಸ್’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಗಳಿಸುತ್ತಿದೆ. ಸುಮಾರು 4,000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಇದುವರೆಗೆ ಸುಮಾರು 116 ಕೋಟಿ ರೂಗೂ ಅಧಿಕ ಹಣವನ್ನು ಚಿತ್ರ ಬಾಚಿಕೊಂಡಿದೆ. ‘ಝುಂಡ್’ ಚಿತ್ರ ಸುಮಾರು 15 ಕೋಟಿ ರೂಗೂ ಅಧಿಕ ಮೊತ್ತವನ್ನು ಗಳಿಸಿದೆ.
ಇದನ್ನೂ ಓದಿ:
RRR ಪ್ರೀ-ರಿಲೀಸ್ ಇವೆಂಟ್ನಲ್ಲಿ ಜ್ಯೂ. ಎನ್ಟಿಆರ್ ಕನ್ನಡ ಮಾತು; ಫ್ಯಾನ್ಸ್ ಮನಗೆದ್ದ ಸ್ಟಾರ್ ನಟ