
ಆಗಸ್ಟ್ 14ರಂದು ‘ವಾರ್ 2’ (War 2) ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ (Jr NTR), ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಮುಂತಾದವರು ನಟಿಸಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಘಟಾನುಘಟಿ ಕಲಾವಿದರು ನಟಿಸಿರುವುದರಿಂದ ಎಲ್ಲರಿಗೂ ಭಾರಿ ಮೊತ್ತದ ಸಂಭಾವನೆ ನೀಡಲಾಗಿದೆ. ಅಚ್ಚರಿ ಏನೆಂದರೆ, ಹೃತಿಕ್ ರೋಷನ್ (Hrithik Roshan) ಅವರು ಜೂನಿಯರ್ ಎನ್ಟಿಆರ್ಗಿಂತಲೂ ಕಡಿಮೆ ಸಂಭಾವನೆ ಪಡೆದಿದ್ದಾರೆ. ಆದರೆ ಒಂದು ಟಿಸ್ಟ್ ಇದೆ. ಸಂಭಾವನೆ ಮಾತ್ರವಲ್ಲದೇ ಲಾಭದಲ್ಲೂ ಹೃತಿಕ್ ರೋಷನ್ ಪಾಲು ಪಡೆಯಲಿದ್ದಾರೆ.
ವರದಿಗಳ ಪ್ರಕಾರ, ಅಂದಾಜು 400 ಕೋಟಿ ರೂಪಾಯಿ ಬಜೆಟ್ನಲ್ಲಿ ‘ವಾರ್ 2’ ಸಿನಿಮಾ ನಿರ್ಮಾಣ ಆಗಿದೆ. ಇದರಲ್ಲಿ ಪ್ರಚಾರದ ಖರ್ಚು ಸೇರಿಲ್ಲ. ಈ ಮೊದಲು ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ನಿರ್ಮಾಣ ಮಾಡಿದ್ದ ಟೈಗರ್ 3 (530 ಕೋಟಿ ರೂಪಾಯಿ), ‘ಪಠಾಣ್’ (325 ಕೋಟಿ ರೂಪಾಯಿ) ಸಿನಿಮಾಗಳ ಬಜೆಟ್ ಅನ್ನು ‘ವಾರ್ 2’ ಸಿನಿಮಾ ಮೀರಿಸಿದೆ.
400 ಕೋಟಿ ರೂಪಾಯಿ ಬಜೆಟ್ನಲ್ಲಿ ಕಲಾವಿದರ ಸಂಭಾವನೆಗೆ ಬಹುಪಾಲು ಖರ್ಚಾಗಿದೆ. ಜೂನಿಯರ್ ಎನ್ಟಿಆರ್ ಅವರು 70 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಹೃತಿಕ್ ರೋಷನ್ ಅವರಿಗೆ 50 ಕೋಟಿ ರೂಪಾಯಿ ನೀಡಲಾಗಿದೆ. ಅಲ್ಲದೇ, ಸಿನಿಮಾದಿಂದ ಬರುವ ಲಾಭದಲ್ಲಿ ಹೃತಿಕ್ ರೋಷನ್ ಅವರು ಶೇರ್ ಪಡೆಯಲಿದ್ದಾರೆ. ಒಂದು ವೇಳೆ ಈ ಚಿತ್ರ ಬ್ಲಾಕ್ ಬಸ್ಟರ್ ಆದರೆ ಹೃತಿಕ್ ರೋಷನ್ ಅವರಿಗೆ ಹಣದ ಹೊಳೆ ಹರಿಯಲಿದೆ.
ನಟಿ ಕಿಯಾರಾ ಅಡ್ವಾಣಿ ಅವರು ‘ವಾರ್ 2’ ಸಿನಿಮಾಗಾಗಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅನಿಲ್ ಕಪೂರ್ ಅವರಿಗೆ 10 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ. ನಿರ್ದೇಶಕ ಅಯಾನ್ ಮುಖರ್ಜಿ ಅವರು 30 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ಆಗಸದಲ್ಲಿ ‘ವಾರ್ 2’; ಗಾಬರಿಯಾದ ಮೆಲ್ಬರ್ನ್ ಜನತೆ: ವಿಡಿಯೋ ವೈರಲ್
ಇತ್ತೀಚೆಗೆ ‘ವಾರ್ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ಟ್ರೇಲರ್ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಸಿನಿಮಾ ಪ್ರಚಾರ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮೆಲ್ಬರ್ನ್ನಲ್ಲಿ ವಿಮಾನಗಳ ಮೂಲಕ ಆಗಸದಲ್ಲಿ ‘ವಾರ್ 2’ ಎಂದು ಬರೆಯಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:20 am, Sun, 27 July 25