‘ಸಲ್ಮಾನ್​ಗೆ ಹೆದರಿ ಪಾದದ ಧೂಳನ್ನು ನೆಕ್ಕಲು ಹೊರಟಿದ್ದಾರೆ’; ಕಾಲಾ ಹಿರಣ್ ನಿರ್ಮಾಪಕರ ಆರೋಪ

ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣ ಆಧರಿಸಿದ 'ಕಾಲಾ ಹಿರಣ್' ಚಿತ್ರದ ಸುತ್ತ ವಿವಾದ ತೀವ್ರಗೊಂಡಿದೆ. ನಟ ಗೋವಿಂದ್ ನಾಮ್‌ದೇವ್, ನಿರ್ಮಾಪಕರು ಸತ್ಯ ಮರೆಮಾಚಿ ಮೋಸ ಮಾಡಿದರು ಎಂದು ಆರೋಪಿಸಿದರೆ, ನಿರ್ಮಾಪಕ ಅಮಿತ್ ಜಾನಿ ಇದನ್ನು ತಳ್ಳಿಹಾಕಿದ್ದಾರೆ. ನಾಮ್‌ದೇವ್ ಚಿತ್ರೀಕರಣದ ವೇಳೆ ಎಲ್ಲವನ್ನೂ ತಿಳಿದಿದ್ದರು, ಸ್ಕ್ರಿಪ್ಟ್ ಓದಿದ್ದರು ಎಂದು ಜಾನಿ ಹೇಳಿದ್ದಾರೆ. ಸುಳ್ಳು ಆರೋಪಗಳಿಗಾಗಿ ಕಾನೂನು ಕ್ರಮ ಜರುಗಿಸುವುದಾಗಿ ನಿರ್ಮಾಪಕರು ಎಚ್ಚರಿಸಿದ್ದಾರೆ.

‘ಸಲ್ಮಾನ್​ಗೆ ಹೆದರಿ ಪಾದದ ಧೂಳನ್ನು ನೆಕ್ಕಲು ಹೊರಟಿದ್ದಾರೆ’; ಕಾಲಾ ಹಿರಣ್ ನಿರ್ಮಾಪಕರ ಆರೋಪ
ಕಾಲಾ ಹಿರಣ್​-ಸಲ್ಮಾನ್
Edited By:

Updated on: Jun 15, 2026 | 11:03 AM

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಸಿದ್ಧವಾಗುತ್ತಿರುವ ‘ಕಾಲಾ ಹಿರಣ್’ ಚಿತ್ರದ ಸುತ್ತಲಿನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟೀಸರ್ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿತ್ರದಲ್ಲಿ ವಕೀಲರ ಪಾತ್ರ ಮಾಡಿರುವ ಹಿರಿಯ ನಟ ಗೋವಿಂದ್ ನಾಮ್‌ದೇವ್ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ನಿರ್ಮಾಪಕ ಅಮಿತ್ ಜಾನಿ ಅವರು ನಟನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಗೋವಿಂದ್ ನಾಮ್‌ದೇವ್ ಮಾಡಿದ್ದ ಆರೋಪವೇನು?

ಸಲ್ಮಾನ್ ಖಾನ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಗೋವಿಂದ್ ನಾಮ್‌ದೇವ್, “ಈ ಚಿತ್ರವು ಸಲ್ಮಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ ಎಂಬ ಸತ್ಯವನ್ನು ನಿರ್ಮಾಪಕರು ನನ್ನಿಂದ ಮರೆಮಾಚಿದ್ದರು. ಸುಳ್ಳು ಹೇಳಿ ನನ್ನಿಂದ ಶೂಟಿಂಗ್ ಮಾಡಿಸಿಕೊಂಡಿದ್ದಾರೆ. ಒಂದು ವೇಳೆ ಈ ವಿಷಯ ನನಗೆ ಮೊದಲೇ ತಿಳಿದಿದ್ದರೆ, ನಾನು ಖಂಡಿತ ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಸಲ್ಮಾನ್ ನನ್ನ ಆತ್ಮೀಯ ಸ್ನೇಹಿತ, ಅವರ ವಿರುದ್ಧ ಹೋಗುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ನಟನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಅಮಿತ್ ಜಾನಿ, ’ಇದೆಲ್ಲ ಶುದ್ಧ ಸುಳ್ಳು. ಅವರು ಎಷ್ಟು ದುರ್ಬಲರಾಗಿದ್ದಾರೆ ಎಂದರೆ, ಈಗ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಹೆದರಿ ಅವರ ಪಾದದ ಧೂಳನ್ನು ನೆಕ್ಕಲು ಹೊರಟಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಇಡೀ ಸ್ಕ್ರಿಪ್ಟ್ ಅನ್ನು ಅವರಿಗೆ ಓದಿಸಲಾಗಿತ್ತು. 1998 ರಿಂದ 2018 ರವರೆಗೆ ಜೋಧ್‌ಪುರ ನ್ಯಾಯಾಲಯದಲ್ಲಿ ನಡೆದ 20 ವರ್ಷಗಳ ಹಳೆಯ ಕೃಷ್ಣಮೃಗ ಬೇಟೆ ಪ್ರಕರಣದ ಸನ್ನಿವೇಶಗಳನ್ನೇ ಆ ವ್ಯಕ್ತಿ ಸತತ ಮೂರು-ನಾಲ್ಕು ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ. ಜೀಪಿನ ಮೇಲಿದ್ದ ರಕ್ತದ ಕಲೆ, ಟೈರ್‌ನಲ್ಲಿ ಸಿಲುಕಿಕೊಂಡಿದ್ದ ಕೃಷ್ಣಮೃಗದ ಕೂದಲು.. ಇವೆಲ್ಲ ಕಣ್ಣಿಗೆ ಕಾಣುತ್ತಿದ್ದರೂ ತಮಗೆ ಏನೂ ಗೊತ್ತಿರಲಿಲ್ಲ ಎನ್ನುತ್ತಿರುವುದು ನಗು ತರಿಸುತ್ತದೆ’ ಎಂದು ಟೀಕಿಸಿದ್ದಾರೆ.

ಬಂದೂಕು ತೋರಿಸಿ ಶೂಟಿಂಗ್ ಮಾಡಿಸಿಲ್ಲ!

ಚಿತ್ರದಲ್ಲಿ ಅಯಾನ್ ಖಾನ್ ಎಂಬ ಪಾತ್ರ ಮಾಡಿರುವ ಗೋವಿಂದ್ ನಾಮ್‌ದೇವ್, ಸೆಟ್‌ನಲ್ಲಿ ತಾವೇ ಸ್ವತಃ ಈ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಕೂಲಂಕಷವಾಗಿ ವಿಚಾರಿಸಿದ್ದರು ಎಂದು ನಿರ್ಮಾಪಕರು ಹೇಳಿದ್ದಾರೆ. “ಅವರು ಚಿತ್ರದ ಪ್ರಮುಖ ಸಂಭಾಷಣೆಗಳನ್ನು ಪದೇ ಪದೇ ಹೇಳಿ ಅಭ್ಯಾಸ ಮಾಡಿದ್ದರು. ಅಷ್ಟೊಂದು ದೊಡ್ಡ ನಟರು ಸ್ಕ್ರಿಪ್ಟ್ ಇಲ್ಲದೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ನಾವೇನು ಅವರ ತಲೆಗೆ ಬಂದೂಕು ಇಟ್ಟು, ಬಲವಂತವಾಗಿ ಶೂಟಿಂಗ್ ಮಾಡಿಸಿದ್ದೇವಾ? ಚಿತ್ರದ ಹೆಸರೇ ‘ಕಾಲಾ ಹಿರಣ್’ (ಕೃಷ್ಣಮೃಗ) ಎಂದಿರುವಾಗ ಇಲ್ಲಿ ಮೋಸ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಗೋವಿಂದ್ ನಾಮ್‌ದೇವ್ ಅವರು ಸಿನಿಮಾ ಮತ್ತು ನಮ್ಮ ಪ್ರೊಡಕ್ಷನ್ ಹೌಸ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ನಾವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಮಿತ್ ಜಾನಿ ಸ್ಪಷ್ಟಪಡಿಸಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us