ಅಪ್ಘಾನಿಸ್ತಾನದ ಜನರ ಪಾಲಿಗೆ ತಾಲಿಬಾನಿಗಳು ವೈರಿಗಳಂತೆ ಕಾಡುತ್ತಿದ್ದಾರೆ. ಅವರ ಕ್ರೂರತೆಗೆ ಆ ದೇಶದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಮಧ್ಯೆ ಅಲ್ಲಿಂದ ಪ್ರಾಣ ಉಳಿಸಿಕೊಂಡು ಬಂದ ಅನೇಕರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಶೂಟಿಂಗ್ ವೇಳೆ ತಾಲಿಬಾನಿಗಳಿಂದ ಜೀವ ಬೆದರಿಕೆ ಬಂದಿತ್ತು ಎಂಬ ವಿಚಾರವನ್ನು ಬಾಲಿವುಡ್ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಹೇಳಿಕೊಂಡಿದ್ದಾರೆ.
‘ಅದು ನನ್ನ ಮೊದಲ ಸಿನಿಮಾ. ‘ಕಾಬೂಲ್ ಎಕ್ಸ್ಪ್ರೆಸ್’ (2006) ಶೂಟಿಂಗ್ಗಾಗಿ ನಾನು ಅಪ್ಘಾನಿಸ್ತಾನಕ್ಕೆ ತೆರಳಿದ್ದೆ. ಆದಿತ್ಯ ಚೋಪ್ರಾ ಅವರು ಅಪ್ಘಾನಿಸ್ತಾನದಲ್ಲಿ ಶೂಟ್ ಮಾಡೋದು ಕಷ್ಟ ಎಂದು ಹೇಳಿದ್ದರು. ಆದರೆ, ಅಲ್ಲಿಯ ಜನರು ಸಿನಿಮಾ ಶೂಟ್ಗೆ ಸಹಾಯ ಮಾಡಿದ್ದರು. ಈ ವೇಳೆ ತಾಲಿಬಾನಿಗಳಿಂದ ಜೀವ ಬೆದರಿಕೆ ಇತ್ತು. ಆದರೆ, ಅಲ್ಲಿನ ಜನರು ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈಗ ಅವರೇ ಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡೋಕೆ ಆಗುತ್ತಿಲ್ಲ ಎನ್ನುವ ಬೇಸರ ನನಗಿದೆ’ ಎಂದಿದ್ದಾರೆ ಕಬೀರ್ ಖಾನ್.
‘ಅಪ್ಘಾನಿಸ್ತಾನದಲ್ಲಿ ಸಿನಿಮಾವನ್ನು ತಾಲಿಬಾನಿಗಳು ಬ್ಯಾನ್ ಮಾಡಿದ್ದಾರೆ. ಈ ಕಾರಣಕ್ಕೆ ಅಲ್ಲಿನ ಚಿತ್ರರಂಗ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಮಾತನಾಡಿರುವ ಕಬೀರ್ ಖಾನ್, ‘ಅಲ್ಲಿಯೂ ಸಿನಿಮಾ ರಂಗದಲ್ಲಿ ತೊಡಗಿಕೊಂಡವರಿದ್ದಾರೆ. ಆದರೆ, ಅವರು ತಾಲಿಬಾನಿಗಳಿಂದ ಟಾರ್ಗೆಟ್ಗೆ ಒಳಗಾಗುತ್ತಿದ್ದಾರೆ. ಈ ಮೊದಲು ತಾಲಿಬಾನಿಗಳು ಆಕ್ರಮಣ ಮಾಡಿದಾಗ ಫೋಟೋಗ್ರಫಿ, ಸಿನಿಮಾಗಳನ್ನು ಬ್ಯಾನ್ ಮಾಡಿದ್ದರು. ತಾಲಿಬಾನಿಗಳು ದೇಶಬಿಟ್ಟ ನಂತರದಲ್ಲಿ ಆಪ್ಘನ್ನರು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು. ಆದರೆ ಈಗ ಅಲ್ಲಿನ ಚಿತ್ರರಂಗ ಏನಾಗುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ’ ಎಂದಿದ್ದಾರೆ.
ಅಪ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದಾರೆ. ಅಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇಡೀ ವಿಶ್ವ ಮರುಕ ವ್ಯಕ್ತಪಡಿಸುತ್ತಿದೆ. ಸಾಕಷ್ಟು ಜನರು ಅಪ್ಘಾನಿಸ್ತಾನದಿಂದ ಪಲಾಯನ ಮಾಡಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದು ಕಡೆ ತಾಲಿಬಾನಿಗಳ ಅಟ್ಟಹಾಸ ಜೋರಾಗಿದೆ. ಎಲ್ಲೆಂದರಲ್ಲಿ ಹಿಂಸೆ ನೀಡುತ್ತಿದ್ದಾರೆ. ಈ ವಿಚಾರ ಭಾರತದಲ್ಲೂ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು