Kamal Kishor Mishra: ಪರಸ್ತ್ರೀ ಜತೆ ಸಿಕ್ಕಿಬಿದ್ದು, ಹೆಂಡತಿ ಮೇಲೆ ಕಾರು ಹತ್ತಿಸಿ ಕೊಲೆ ಪ್ರಯತ್ನ ಮಾಡಿದ ನಿರ್ಮಾಪಕ ಕಮಲ್ ಮಿಶ್ರಾ ಬಂಧನ
Kamal Kishor Mishra Arrest: ಯಾಸ್ಮಿನ್ ನೀಡಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಮಲ್ ಕಿಶೋರ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.
ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ (Kamal Kishor Mishra) ಅವರ ಬಂಧನ ಆಗಿದೆ. ಮುಂಬೈ ಪೊಲೀಸರು ಗುರುವಾರ (ಅ.27) ರಾತ್ರಿ ಅವರನ್ನು ಅರೆಸ್ಟ್ (Kamal Kishor Mishra Arrest) ಮಾಡಿದ್ದಾರೆ. ಪರಸ್ತ್ರೀ ಜೊತೆ ಇದ್ದಾಗ ಪತ್ನಿಯ ಕೈಗೆ ಕಮಲ್ ಕಿಶೋರ್ ಮಿಶ್ರಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ನಂತರ ಅಲ್ಲಿಂದ ಪರಾರಿ ಆಗಲು ಯತ್ನಿಸಿದ್ದರು. ಅವರನ್ನು ತಡೆಯಲು ಹೋದ ಪತ್ನಿಯ ಮೇಲೆ ಕಾರು ಹತ್ತಿಸಿದ್ದರು. ಈ ಶಾಕಿಂಗ್ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ (Kamal Kishor Mishra CCTV video) ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್ ಕಿಶೋರ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.
ಏನಿದು ಘಟನೆ?
ಬಾಲಿವುಡ್ನ ಕೆಲವು ಸಿನಿಮಾಗಳನ್ನು ನಿರ್ಮಿಸಿದ ಕಮಲ್ ಕಿಶೋರ್ ಮಿಶ್ರಾ ಅವರು 9 ವರ್ಷಗಳ ಹಿಂದೆ ಯಾಸ್ಮಿನ್ ಅವರನ್ನು ಮದುವೆಯಾಗಿದ್ದರು. ಆದರೆ ಈಗ ಅವರು ಮಾಡೆಲ್ ಆಯೇಷಾ ಸುಪ್ರಿಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ. ಮಾಡೆಲ್ ಜೊತೆ ಅವರು ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದನ್ನು ನೋಡಿದ ಪತ್ನಿಗೆ ಶಾಕ್ ಆಗಿದೆ. ಕೂಡಲೇ ಕಾರಿನಿಂದ ಹೊರಗೆ ಬರುವಂತೆ ಗಂಡನಿಗೆ ಯಾಸ್ಮಿನ್ ಸೂಚಿಸಿದರು. ಆದರೆ ಪತ್ನಿಯನ್ನು ನೋಡುತ್ತಲೇ ಗಾಬರಿಕೊಂಡ ಕಮಲ್ ಕಿಶೋರ್ ಮಿಶ್ರಾ ಅಲ್ಲಿಂದ ಪರಾರಿ ಆಗಲು ಪ್ರಯತ್ನಿಸಿದರು. ಈ ವೇಳೆ ಪತ್ನಿ ಮೇಲೆ ಅವರು ಕಾರು ಹತ್ತಿಸಿದರು. ಯಾಸ್ಮಿನ್ ಅವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬೋಲಿ ಪೊಲೀಸರಿಂದ ಕಮಲ್ ಮಿಶ್ರಾ ಬಂಧನ:
ಕಮಲ್ ಕಿಶೋರ್ ಮಿಶ್ರಾ ಪತ್ನಿ ಯಾಸ್ಮಿನ್ ನೀಡಿದ ದೂರಿನ ಅನ್ವಯ ಅಂಬೋಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಮಲ್ ಕಿಶೋರ್ ಮಿಶ್ರಾ ಅವರನ್ನು ಬಂಧಿಸಲಾಗಿದೆ. ಕೊಲೆ ಯತ್ನದ ಕೇಸ್ ಅವರ ಮೇಲಿದೆ. ಪತ್ನಿ ಮೇಲೆ ಕಾರು ಹತ್ತಿಸಿದ ಸಿಸಿಟಿವಿ ದೃಶ್ಯ ನೋಡಿದ ನೆಟ್ಟಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಕಮಲ್ ಕಿಶೋರ್ ಮಿಶ್ರಾಗೆ ತಕ್ಕ ಶಿಕ್ಷೆ ಆಗಬೇಕು ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಯಾರು ಈ ಕಮಲ್ ಕಿಶೋರ್ ಮಿಶ್ರಾ?
2018ರಲ್ಲಿ ಕಮಲ್ ಕಿಶೋರ್ ಮಿಶ್ರಾ ಅವರು ಚಿತ್ರರಂಗದ ನಂಟು ಬೆಳೆಸಿಕೊಂಡರು. ಒಂದಷ್ಟು ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಗೀಳು ಅವರಿಗೆ ಇದೆ. ಪತ್ನಿ ಮೇಲೆ ದೌರ್ಜನ್ಯ ಎಸಗಿದ ಅವರೀಗ ಪೊಲೀಸರ ಅತಿಥಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:21 am, Fri, 28 October 22