‘ಲೈಂಗಿಕ ಕ್ರಿಯೆಗೂ ಸೋಮಾರಿತನ’ ಹೊಸತಲೆಮಾರಿನ ವಿರುದ್ಧ ಖ್ಯಾತ ನಟಿ ತಗಾದೆ
ಹೊಸ ತಲೆಮಾರಿನ ಬಗ್ಗೆ ತಗಾದೆ ತೆಗೆದಿರುವ ಬಾಲಿವುಡ್ ನಟಿ, ಜೆನ್ ಜಿ ತಲೆಮಾರಿನ ಯುವಕರ ವಿರುದ್ಧ ಸರಣಿ ಟೀಕೆಗಳನ್ನು ಮಾಡಿದ್ದಾರೆ ಜೊತೆಗೆ ಸವಾಲೊಂದನ್ನು ಸಹ ಎಸೆದಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯ. ಸಿನಿಮಾಗಳಿಗಿಂತಲೂ ಹೆಚ್ಚಿಗೆ ರಾಜಕೀಯ, ಧರ್ಮ, ವಿವಾದ ಇನ್ನಿತರೆ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಿಡು ಬೀಸಾಗಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಠಾತ್ತನೆ ಕಂಗನಾ ಕಣ್ಣು ಜೆನ್ಜಿಗಳ (GenZ) ಮೇಲೆ ಬಿದ್ದಿದೆ. 2000 ನೇ ಇಸವಿಯ ಬಳಿಕ ಹುಟ್ಟಿದ ಹೊಸ ತಲೆಮಾರಿನ ಯುವಕರ ವಿರುದ್ಧ ಕಂಗನಾ ಸರಣಿ ಟೀಕೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಹೊಸತಲೆಮಾರಿನ ಬಗ್ಗೆ ಬರೆದಿರುವ ಕಂಗನಾ, ”ಹಾ.. ಹಾ.. ಜೆನ್ಜಿಗಳು, ಅವರ ಕೈ-ಕಾಲುಗಳು ಒಳ್ಳೆಯ ಸಣ್ಣ ಕೋಲುಗಳಂತಿವೆ. ತಮ್ಮ ಬಹುಪಾಲು ಸಮಯವನ್ನು ಅವರು ಫೋನ್ನಲ್ಲಿಯೇ ಕಳೆಯುತ್ತಾರೆ. ಇತರರೊಟ್ಟಿಗೆ ಸಂವಹನ ಮಾಡುವುದು, ಪ್ರಯಾಣ ಮಾಡುವುದು, ಗಮನಿಸುವಿಕೆ ಇವೆಲ್ಲವೂ ಅವರಿಗೆ ಗೊತ್ತೇ ಇಲ್ಲ. ಅವರಿಗೆ ಸ್ಥಿರತೆ ಎಂಬುದೇ ಇಲ್ಲ. ಅವರಿಗೆ ಪರಿಶ್ರಮದ ಮೇಲೆ ನಂಬಿಕೆ ಇಲ್ಲ. ಶ್ರಮ ಅವರಿಗೆ ಬೇಕಿಲ್ಲ, ಅವರಿಗೆ ತುರ್ತು ಯಶಸ್ಸು ಬೇಕಷ್ಟೆ ಎಂದಿದ್ದಾರೆ.
ಮುಂದುವರೆದು, ಈ ಜೆನ್ಜಿಗಳಿಗೆ ಸ್ಟಾರ್ ಬಕ್ಸ್, ಅವಕಾಡೊ ಟೋಸ್ಟ್ ಎಂದರೆ ಇಷ್ಟ, ಆದರೆ ಅವರಿಗೆ ಒಂದು ಮನೆಯನ್ನು ಖರೀದಿಸುವುದು ಸಹ ಮುಂದೆ ಸಾಧ್ಯವಾಗುವುದಿಲ್ಲ. ಬಾಡಿಗೆ ಬಟ್ಟೆಗಳನ್ನು ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಇತರರನ್ನು ಮೆಚ್ಚಿಸುವುದು ಇಷ್ಟ ಆದರೆ ಪ್ರೀತಿ, ಮದುವೆ, ಕಮಿಟ್ಮೆಂಟ್ ಎಂದರೆ ದೂರ ಓಡುತ್ತಾರೆ. ಸೆಕ್ಸ್ ಮಾಡಲು ಸಹ ಅವರಿಗೆ ಸೋಮಾರಿತನ. ಸ್ವಂತ ಬುದ್ಧಿಯ ಕೊರತೆ ಇರುವ ಅವರನ್ನು ಯಾರು ಬೇಕಾದರೂ ಸುಲಭವಾಗಿ ಹಾದಿ ತಪ್ಪಿಸಿಬಿಡಬಹುದು. ನಾವು ಮಿಲಿಯನ್ಗಳು ಎಷ್ಟೋ ಉತ್ತಮ. ನಾವು ಜಗತ್ತು ಆಳುತ್ತಿದ್ದೇವೆ ಎಂದಿರುವ ಕಂಗನಾ. ಸ್ವಲ್ಪ ಯೋಗ, ಕ್ರೀಡೆ ಸ್ವಲ್ಪ ವ್ಯಾಯಾಮ ಮಾಡಿಬನ್ನಿ ಎಂದು ಜೆನ್ಜಿ ತಲೆಮಾರಿಗೆ ಸವಾಲು ಹಾಕಿದ್ದಾರೆ ಕಂಗನಾ.
1997 ರ ಬಳಿಕ ಜನಿಸಿದವರನ್ನು ಜೆನ್ಜಿ ಎಂದು 1985 ರ ಬಳಿಕ ಜನಿಸಿದವರನ್ನು ಮಿಲೇನಿಯನ್ಗಳೆಂದು ಕರೆಯಲಾಗುತ್ತದೆ. ಈ ಎರಡು ತಲೆಮಾರುಗಳಲ್ಲಿ ಯಾವ ತಲೆಮಾರು ಉತ್ತಮ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಸ್ವತಃ ಮಿಲೇನಿಯಲ್ ಆಗಿರುವ ಕಂಗನಾ ಸಹಜವಾಗಿಯೇ ಮಿಲೇನಿಯಲ್ಗಳ ಪರ ನಿಂತು ಜೆನ್ಜಿಗಳ ವಿರುದ್ಧ ಸರಣಿ ಟೀಕೆಗಳನ್ನು ಮಾಡಿದ್ದಾರೆ.
ಸಿನಿಮಾ ವಿಷಯಕ್ಕೆ ಮರಳುವುದಾದರೆ ನಟಿ ಕಂಗನಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಡುಗಡೆ ಆದ ಅವರ ಕೊನೆಯ ಸಿನಿಮಾ ಧಾಕಡ್ ಹೀನಾಯ ಸೋಲು ಕಂಡಿದ್ದು, ಒಂದು ಭರ್ಜರಿ ಹಿಟ್ಗಾಗಿ ಎದುರು ನೋಡುತ್ತಿದ್ದಾರೆ ಕಂಗನಾ. ಕನ್ನಡದಲ್ಲಿ ಆಪ್ತಮಿತ್ರ ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ನಿರ್ದೇಶನದ ಚಂದ್ರಮುಖಿ 2 ಸಿನಿಮಾದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ತಮ್ಮದೇ ನಿರ್ಮಾಣದ ಎಮರ್ಜೆನ್ಸಿ ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ ಕಂಗನಾ. ನವಾಜುದ್ದಿನ್ ಸಿದ್ಧಿಖಿ ಜೊತೆಗೆ ಟಿಕು ವೆಡ್ಸ್ ಶೇರು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಜೊತೆಗೆ, ರಾಜಮೌಳಿ ತಂದೆ ವಿಜಯೇಂದ್ರ ನಿರ್ದೇಶಿಸಲಿರುವ ಸೀತ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Sat, 4 March 23