ಆಲಿಯಾ, ಕರಣ್ ವಿರುದ್ಧ ಸಿಟ್ಟು ಹೊರಹಾಕಿದ ನಟಿ, ಸಂಸದೆ ಕಂಗನಾ ರನೌತ್
Kangana Ranaut: ತಮ್ಮ ಈ ಹಿಂದಿನ ಮಹಿಳಾ ಪ್ರಧಾನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿರುವುದಕ್ಕೆ ಕರಣ್ ಜೋಹರ್ ಹಾಗೂ ಆಲಿಯಾ ಭಟ್ ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ನಟಿ ಕಂಗನಾ ರನೌತ್ ಪದೇ ಪದೇ ಬಾಲಿವುಡ್ ವಿರುದ್ಧ, ಬಾಲಿವುಡ್ನ ಸ್ಟಾರ್ ಸೆಲೆಬ್ರಿಟಿಗಳ ವಿರುದ್ಧ ವಿಷ ಕಕ್ಕುತ್ತಲೇ ಇರುತ್ತಾರೆ. ಬಾಲಿವುಡ್ ಎಂಬುದು ಮಾಫಿಯಾ, ನನ್ನನ್ನು ತುಳಿಯಲು ಪ್ರಯತ್ನಿಸಿದ್ದಾರೆ, ನನಗೆ ಮೋಸ ಮಾಡಿದ್ದಾರೆ ಎಂದು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಕಂಗನಾರ ಈ ನಾಲಗೆ ಹರಿಬಿಡುವತನದಿಂದಲೇ ಜಾವೇದ್ ಅಖ್ತರ್ ಸೇರಿದಂತೆ ಕೆಲವರು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ. ಇದರ ನಡುವೆ ಇದೀಗ ತಾವಾಯ್ತು, ತಮ್ಮ ಸಿನಿಮಾ ಆಯ್ತು, ಕುಟುಂಬವಾಯ್ತು ಎಂದಿರುವ ಆಲಿಯಾ ಭಟ್ ವಿರುದ್ಧ ಹಾಗೂ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಕಂಗನಾ ಹರಿಹಾಯ್ದಿದ್ದಾರೆ.
ಹೆಸರು ಬಳಸದೇ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ ಕಂಗನಾ, ಆದರೆ ಕಂಗನಾರ ಗುರಿ ಆಲಿಯಾ ಮತ್ತು ಕರಣ್ ಜೋಹರ್ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಂಗನಾ ಸಾಮಾನ್ಯವಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಾರೆ. ಇತ್ತಿಚೆಗಿನ ವರ್ಷಗಳಲ್ಲಿ ಅವರು ನಟಿಸಿದ ಸಾಲು-ಸಾಲು ಸಿನಿಮಾಗಳು ಸೋತಿವೆ. ಅದರಲ್ಲೂ ಕಂಗನಾ ನಟಿಸಿದ್ದ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳಾದ ‘ಧಾಕಡ್’, ‘ತೇಜಸ್’ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿದ್ದವು. ಈ ಸಿನಿಮಾಗಳು ಫ್ಲಾಪ್ ಆಗಲು ಕರಣ್, ಆಲಿಯಾ ಎಂಬ ಆರೋಪವನ್ನು ನಟಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಆಲಿಯಾ ಭಟ್ ಸಖತ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಹೋದರನ್ನು ಕಾಪಾಡಲು ಹೋರಾಡುವ ಅಕ್ಕನ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಆದರೆ ಈ ಸಿನಿಮಾಕ್ಕೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಸಿನಿಮಾದ ಒಳ್ಳೆಯ ವಿಮರ್ಶೆಗಳು ಸಹ ವ್ಯಕ್ತವಾಗಲಿಲ್ಲ. ಇದೇ ವಿಷಯ ಇಟ್ಟುಕೊಂಡು ಆಲಿಯಾ ಹಾಗೂ ಕರಣ್ ವಿರುದ್ಧ ಆರೋಪ ಮಾಡಿದ್ದಾರೆ ಕಂಗನಾ.
ಇದನ್ನೂ ಓದಿ:ಮೊದಲ ಪ್ರಯತ್ನದಲ್ಲೇ ಗೆಲುವು, ಕಂಗನಾ ರನೌತ್ ಹೇಳಿದ್ದು ಹೀಗೆ
‘ಮಹಿಳಾ ಪ್ರಧಾನ ಸಿನಿಮಾಗಳನ್ನು ಹಾಳು ಮಾಡಿ, ಅವು ಬಾಕ್ಸ್ ಆಫೀಸ್ನಲ್ಲಿ ಓಡದಂತೆ ಮಾಡಿ, ಈಗ ನೀನು ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಿದಾಗ ಅವು ಸಹ ಒಳ್ಳೆಯ ಪ್ರದರ್ಶನ ಕಾಣುವುದಿಲ್ಲ. ಈ ಸಾಲುಗಳನ್ನು ಮತ್ತೆ ಓದಿಕೊ’ ಎಂದು ಬರೆದುಕೊಂಡಿದ್ದಾರೆ ಕಂಗನಾ ರನೌತ್. ಕರಣ್ ಜೋಹರ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ಕಂಗನಾ ಹರಿಹಾಯ್ದಿದ್ದಾರೆ. ಆರೋಪಗಳನ್ನು ಮಾಡಿದ್ದಾರೆ.
ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಸೆನ್ಸಾರ್ ಬೋರ್ಡ್ನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಸೆನ್ಸಾರ್ನವರು ಹಲವು ಕಟ್ ಮಾಡುವಂತೆ ಕಂಗನಾಗೆ ಸೂಚಿಸಿದ್ದಾರೆ. ಆದರೆ ಕಂಗನಾ ಸಿಬಿಎಫ್ಸಿ ಸೂಚಿಸಿರುವ ಕಟ್ಗಳನ್ನು ಮಾಡಲು ಕಂಗನಾ ಒಲ್ಲೆ ಎಂದಿದ್ದು ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಅಲ್ಲದೆ ಕಂಗನಾರ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗದೇ ಇರಲು ರಾಜಕೀಯ ಕಾರಣವೂ ಇದೆ. ಆದರೆ ತಮ್ಮ ಸಿನಿಮಾ ಬಿಡುಗಡೆ ಆಗದೇ ಇರಲು ಆಲಿಯಾ ಭಟ್ ಹಾಗೂ ಕರಣ್ ಜೋಹರ್ ಕಾರಣ ಎಂದು ಕಂಗನಾ ಪರೋಕ್ಷವಾಗಿ ಆರೋಪಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ