ಮುಂಬೈ ಬೀದಿಯಲ್ಲಿ ರವೀನಾ ಟಂಡನ್​ ಮೇಲೆ ನಡೆದ ಹಲ್ಲೆ ಖಂಡಿಸಿದ ಕಂಗನಾ ರಣಾವತ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರು ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ರವೀನಾ ಟಂಡನ್​ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಶನಿವಾರ (ಜೂ.1) ರಾತ್ರಿ ರವೀನಾ ಟಂಡನ್​ ಅವರ ಮನೆಯ ಎದುರಲ್ಲಿ ಗಲಾಟೆ ನಡೆದಿದೆ. ಆ ಘಟನೆಯನ್ನು ಕಂಗನಾ ರಣಾವತ್​ ಅವರು ಖಂಡಿಸಿದ್ದಾರೆ.

ಮುಂಬೈ ಬೀದಿಯಲ್ಲಿ ರವೀನಾ ಟಂಡನ್​ ಮೇಲೆ ನಡೆದ ಹಲ್ಲೆ ಖಂಡಿಸಿದ ಕಂಗನಾ ರಣಾವತ್​
ಕಂಗನಾ ರಣಾವತ್​, ರವೀನ್ ಟಂಡನ್​

Updated on: Jun 03, 2024 | 4:32 PM

ನಟಿ ರವೀನಾ ಟಂಡನ್​ ಅವರ ಮೇಲೆ ಕೆಲವರು ಇತ್ತೀಚೆಗೆ ಹಲ್ಲೆ (Assault) ಮಾಡಿದರು. ಆ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದನ್ನು ನೋಡಿ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ. ಬಾಲಿವುಡ್​ ನಟಿ ಕಂಗನಾ ರಣಾವತ್ (Kangana Ranaut) ಕೂಡ ಈ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ರವೀನಾ ಟಂಡನ್​ (Raveena Tandon) ಪರವಾಗಿ ಕಂಗನಾ ಬ್ಯಾಟ್​ ಬೀಸಿದ್ದಾರೆ. ನಟಿಯ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಕಂಗನಾ ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ರವೀನಾ ಟಂಡನ್ ಅವರ ಮೇಲೆ ಆದ ಹಲ್ಲೆ ನಿಜಕ್ಕೂ ಒಂದು ಎಚ್ಚರಿಕೆ ಗಂಟೆ. ವಿರುದ್ಧ ಗುಂಪಿನಲ್ಲಿ 5-6 ಜನರು ಇದ್ದರು. ರವೀನಾ ಮೇಲೆ ಗುಂಪು ಹಲ್ಲೆ ಆಗುವುದರಲ್ಲಿತ್ತು. ಇಂಥ ಬೀದಿ ಜಗಳವನ್ನು ನಾವು ಖಂಡಿಸಬೇಕು. ಅಂಥವರಿಗೆ ಶಿಕ್ಷೆ ಆಗಬೇಕು. ಈ ರೀತಿ ಕ್ರೂರ ಮತ್ತು ವಿಷಕಾರಿ ಕೆಲಸ ಮಾಡಿದವರನ್ನು ಸುಮ್ಮನೆ ಬಿಡಬಾರದು’ ಎಂದಿದ್ದಾರೆ ಕಂಗನಾ ರಣಾವತ್​. ಅವರು ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಆಗಿದ್ದಾರೆ. ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಅವರು ಪ್ರಚಾರ ಮಾಡಿದ್ದಾರೆ. ಜೂನ್​ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ಶನಿವಾರ (ಜೂನ್​ 1) ರಾತ್ರಿ ರವೀನಾ ಟಂಡನ್​ ಅವರ ಮನೆಯ ಎದುರಲ್ಲೇ ಈ ಗಲಾಟೆ ನಡೆದಿದೆ. ರವೀನಾ ಟಂಡನ್​ ಅವರ ಕಾರು ರಿವರ್ಸ್​ ತೆಗೆಯುವಾಗ ಪಾದಚಾರಿಗಳಿಗೆ ಡಿಕ್ಕಿ ಆಗಿದೆ ಎನ್ನಲಾಗಿದೆ. ಆ ಬಳಿಕ ನಟಿ ಮತ್ತು ಚಾಲಕನ ವಿರುದ್ಧ ಜನರು ಗರಂ ಆಗಿದ್ದಾರೆ. ಈ ಸಂದರ್ಭದಲ್ಲಿ ರವೀನಾ ಕೂಡ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ತನಿಖೆ ಬಳಿಕ ಪೂರ್ಣ ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ: ‘ಪ್ಲೀಸ್​ ಹೊಡೆಯಬೇಡಿ’: ಕೈ ಮುಗಿದು ಬೇಡಿಕೊಂಡ ರವೀನಾ ಟಂಡನ್​

ರವೀನಾ ಟಂಡನ್​ ಅವರ ಗಲಾಟೆ ಬಗ್ಗೆ ಮೊಹಮ್ಮದ್​ ಎಂಬ ವ್ಯಕ್ತಿಯ ಹೇಳಿಕೆ ವೈರಲ್​ ಆಗಿದೆ. ‘ನನ್ನ ಹೆಸರು ಮೊಹಮ್ಮದ್​. ನಾನು ಬಾಂದ್ರಾ ನಿವಾಸಿ. ನನ್ನ ತಾಯಿ, ಸಹೋದರಿ ಮುಂತಾದವರ ಜತೆ ನಾವು ಹೊರಗೆ ಹೋಗಿದ್ದೆವು. ಅಲ್ಲಿಂದ ವಾಪಸ್​ ಬರುವಾಗ, ರವೀನಾ ಟಂಡನ್​ ಮನೆಯ ಬಳಿ ನನ್ನ ತಾಯಿ ಮೇಲೆ ಅವರ ಚಾಲಕ ಕಾರು ಹತ್ತಿಸಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಆತ ನಮ್ಮ ಮೇಲೆ ಹಲ್ಲೆ ಮಾಡಿದ’ ಎಂದಿದ್ದಾರೆ ಮೊಹಮ್ಮದ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us