ನಟಿ, ನೂತನ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಒಂದಿಲ್ಲಾ ಒಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. 2020ರಲ್ಲಿ ಅವರು ಪಂಜಾಬ್ ರೈತರ ಚಳುವಳಿ ಬಗ್ಗೆ ನೀಡಿದ್ದ ಹೇಳಿಕೆಯಿಂದ ವಿವಾದ ಹುಟ್ಟಿಕೊಂಡಿತ್ತು. ‘ಈ ಹೋರಾಟಗಾರರು 100 ರೂಪಾಯಿಗೆ ಬರುತ್ತಾರೆ’ ಎಂಬ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ (Kulwinder Kaur) ಅವರು ಗುರುವಾರ (ಜೂನ್ 6) ಕಂಗನಾರ ಕೆನ್ನೆಗೆ ಬಾರಿಸಿದ್ದು ದೊಡ್ಡ ಸುದ್ದಿ ಆಯಿತು. ಆ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ (Bollywood) ಸೆಲೆಬ್ರಿಟಿಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಅದು ಕಂಗನಾ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.
ಹಿಂದಿ ಚಿತ್ರರಂಗದಲ್ಲಿ ಕಂಗನಾ ರಣಾವತ್ ಅವರು ಬಂಡಾಯ ಎದ್ದು ಹಲವು ವರ್ಷ ಕಳೆದಿದೆ. ಅನೇಕ ಸೆಲೆಬ್ರಿಟಿಗಳ ವಿರುದ್ಧ ಅವರು ಆಗಾಗ ಕಿಡಿಕಾರುತ್ತಾರೆ. ಕರಣ್ ಜೋಹರ್, ಆಲಿಯಾ ಭಟ್, ರಣಬೀರ್ ಕಪೂರ್ ಮುಂತಾದವರ ವಿರುದ್ಧ ಅವರು ಸಿಡುಕುತ್ತಾರೆ. ಈಗ ಕಂಗನಾ ರಣಾವತ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ್ದನ್ನು ಬಿ-ಟೌನ್ ಮಂದಿ ಸೆಲೆಬ್ರೇಟ್ ಮಾಡುತ್ತಿರಬಹುದಾ? ಕಂಗನಾಗೆ ಆ ರೀತಿ ಅನಿಸಿದೆ.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ರಣಾವತ್ ಅವರು ಬರೆದುಕೊಂಡಿದ್ದರು. ಆದರೆ ಕೂಡಲೇ ಅದನ್ನು ಡಿಲೀಟ್ ಕೂಡ ಮಾಡಿದ್ದಾರೆ. ‘ಪ್ರೀತಿಯ ಚಿತ್ರರಂಗದವರೇ, ನನ್ನ ಮೇಲೆ ವಿಮಾನ ನಿಲ್ದಾಣದಲ್ಲಿ ದಾಳಿ ಆಗಿದ್ದಕ್ಕೆ ನೀವೆಲ್ಲ ಸಂಭ್ರಮಿಸುತ್ತಿರಬಹುದು. ನೀವೆಲ್ಲ ಸಂಪೂರ್ಣ ಮೌನವಾಗಿದ್ದೀರಿ’ ಎಂದು ಹೇಳಿರುವ ಕಂಗನಾ ಅವರು ‘ಮುಂದೆ ನಿಮಗೂ ಈ ರೀತಿ ಆಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್ ದದ್ಲಾನಿ
ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ರಫಾ ಹತ್ಯಾಕಾಂಡವನ್ನು ಖಂಡಿಸಿ ‘All Eyes On Rafah’ (ರಫಾ ಮೇಲೆ ಎಲ್ಲರ ಕಣ್ಣು) ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ವಿಚಾರವನ್ನು ಕಂಗನಾ ರಣಾವತ್ ಅವರು ಈಗ ಟೀಕಿಸಿದ್ದಾರೆ. ‘ರಫಾ ಮೇಲೆ ಎಲ್ಲರ ಕಣ್ಣು ಎನ್ನುವ ಗ್ಯಾಂಗ್ನವರೇ.. ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಈ ರೀತಿ ಆಗಬಹುದು. ಇನ್ನೊಬ್ಬರ ಮೇಲೆ ಆಗುವ ಭಯೋತ್ಪಾದಕ ದಾಳಿಯನ್ನು ನೀವು ಬೆಂಬಲಿಸಿದರೆ ನಿಮ್ಮ ಮೇಲೂ ಹಾಗೆಯೇ ಆಗುತ್ತದೆ. ಆ ದಿನಕ್ಕಾಗಿ ಸಿದ್ಧರಾಗಿರಿ’ ಎಂದು ಕಂಗನಾ ಅವರು ಪೋಸ್ಟ್ ಮಾಡಿದ್ದರು. ನಂತರ ಡಿಲೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.