ಹೇಳಿದ ಕಡೆ ಕತ್ತರಿ ಹಾಕಿದ್ರೆ ಮಾತ್ರ ‘ಎಮರ್ಜೆನ್ಸಿ’ ಸಿನಿಮಾಗೆ ಸಿಗುತ್ತೆ ಸೆನ್ಸಾರ್ ಪ್ರಮಾಣ ಪತ್ರ
‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆಗೆ ಹಲವು ವಿಘ್ನಗಳು ಎದುರಾಗಿವೆ. ಆದ್ದರಿಂದ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಇನ್ನೂ ಸಿಕ್ಕಿಲ್ಲ. ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಅಂತಹ ದೃಶ್ಯಗಳನ್ನು ಕಟ್ ಮಾಡಿದ ನಂತರವೇ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಸಿನಿಮಾಗೆ ಕಂಗನಾ ರಣಾವತ್ ಅವರು ನಿರ್ದೇಶನ ಮಾಡಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೇ ನಿರ್ದೇಶನವನ್ನೂ ಅವರೇ ಮಾಡಿದ್ದಾರೆ. ಈ ಸಿನಿಮಾದ ನಿರ್ಮಾಣದಲ್ಲೂ ಕಂಗನಾ ಅವರು ಪಾಲುದಾರಿಕೆ ಹೊಂದಿದ್ದಾರೆ. ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದಿದ್ದರೆ ಈಗಾಗಲೇ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗುವುದು ತಡವಾಗಿದೆ. ಹಾಗಾಗಿ ರಿಲೀಸ್ ದಿನಾಂಕ ಮುಂದೂಡಿಕೆ ಆಯಿತು. ಈ ಬಗ್ಗೆ ಒಂದು ಅಪ್ಡೇಟ್ ಸಿಕ್ಕಿದೆ.
ಸಿನಿಮಾದ ಬಿಡುಗಡೆ ವಿಳಂಬ ಆಗಿದ್ದರಿಂದ ನಿರ್ಮಾಪಕರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವ ಸೆನ್ಸಾರ್ ಮಂಡಳಿಗೆ ಕೋರ್ಟ್ ಚಾಟಿ ಬೀಸಿದೆ. ಆದಷ್ಟು ಬೇಗ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಿನಿಮಾವನ್ನು ಈಗಾಗಲೇ ಮೇಲ್ಮನವಿ ಸಮಿತಿ ಕೂಡ ವೀಕ್ಷಿಸಿದೆ. ಆ ಬಗ್ಗೆ ಬಾಂಬೆ ಹೈಕೋರ್ಟ್ಗೆ ಸೆನ್ಸಾರ್ ಮಂಡಳಿ ಮಾಹಿತಿ ನೀಡಿದೆ.
‘ಮೇಲ್ಮನವಿ ಕಮಿಟಿಯು ಸೂಚಿಸಿರುವ ದೃಶ್ಯಗಳಿಗೆ ಚಿತ್ರತಂಡದವರು ಕತ್ತರಿ ಹಾಕಿದರೆ ಪ್ರಮಾಣ ಪತ್ರ ನೀಡಲಾಗುತ್ತದೆ’ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ. ಈಗ ಚಿತ್ರತಂಡದವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದೆ. ಇಂದಿರಾ ಗಾಂಧಿ ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಮೂಡಿಬಂದಿದೆ.
ಇದನ್ನೂ ಓದಿ: ಜನಾಕ್ರೋಶ ಬಳಿಕ ಕೃಷಿ ಕಾನೂನು ಬಗ್ಗೆ ಹೇಳಿದ್ದ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್
ನೈಜ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇತಿಹಾಸದ ಮಾಹಿತಿಯನ್ನು ತಿರುಚಲಾಗಿದೆಯೇ ಎಂಬ ಅನುಮಾನ ಕೂಡ ಕೆಲವರಿಗೆ ಇದೆ. ಸಿಖ್ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ತೋರಿಸಬಾರದು ಎಂದು ಕೂಡ ಕೆಲವರು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಬಿಡುಗಡೆ ಬಳಿಕ ಚಿತ್ರವು ವಿವಾದಕ್ಕೆ ಕಾರಣ ಆಗಬಾರದು ಎಂಬ ಉದ್ದೇಶದಿಂದ ಸೆನ್ಸಾರ್ ಮಂಡಳಿ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.