‘ಜನರೇಷನ್ ಗಟಾರ್’ ಎಂದಿದ್ದ ಕಂಗನಾ ಈಗ ಯೂ ಟರ್ನ್; ‘ಜೆನ್ ಜಿ ಭಾರತದ ಶಕ್ತಿ’ ಎಂದ ನಟಿ

ನಟಿ ಕಂಗನಾ ರಣಾವತ್ ಅವರು ಈ ಮೊದಲು ಜೆನ್ ಜಿ ಯುವಜನತೆ ಬಗ್ಗೆ ನೀಡಿದ್ದ ಹೇಳಿಕೆಗಳು ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದವು. ಇದೀಗ ಕಂಗನಾ ರಣಾವತ್ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದು, ಯುವ ಪೀಳಿಗೆಯನ್ನು ಕೊಂಡಾಡಿರುವುದು ಮತ್ತೆ ಸುದ್ದಿಯಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

‘ಜನರೇಷನ್ ಗಟಾರ್’ ಎಂದಿದ್ದ ಕಂಗನಾ ಈಗ ಯೂ ಟರ್ನ್; ‘ಜೆನ್ ಜಿ ಭಾರತದ ಶಕ್ತಿ’ ಎಂದ ನಟಿ
Kangana Ranaut
Image Credit source: PTI

Updated on: Aug 07, 2026 | 8:12 PM

ಕೆಲವೇ ದಿನಗಳ ಹಿಂದಷ್ಟೇ ಜೆನ್ ಜಿ (Gen Z) ಪೀಳಿಗೆಯನ್ನು ‘ಜನರೇಷನ್ ಗಟಾರ್’ (Generation Gutter) ಎಂದು ಕರೆದು ತೀವ್ರ ವಾಗ್ದಾಳಿ ನಡೆಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಈಗ ದಿಢೀರ್ ಯೂ-ಟರ್ನ್ ಹೊಡೆದಿದ್ದಾರೆ. ಪ್ರಸ್ತುತ ಯುವ ಪೀಳಿಗೆಯೇ ನಮ್ಮ ದೇಶದ ದೊಡ್ಡ ಶಕ್ತಿ ಎಂದು ಅವರು ಹೊಗಳಿಕೆಯ ಮಳೆ ಸುರಿಸಿದ್ದಾರೆ. ಶುಕ್ರವಾರ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಂಗನಾ, ‘ಜೆನ್ ಜಿ ನಮ್ಮ ದೇಶದ ದೊಡ್ಡ ಶಕ್ತಿ. ಒಂದು ರೀತಿಯಲ್ಲಿ ಅವರು ನಮ್ಮ ರಾಷ್ಟ್ರದ ದೊಡ್ಡ ಆಸ್ತಿ. ನಮ್ಮ ದೇಶದ ಯುವಕರು ನಮ್ಮ ಸಂಸ್ಕೃತಿ ಮತ್ತು ಅನನ್ಯತೆಯ ರಾಯಭಾರಿಗಳಾಗಿ ಹೊರಹೊಮ್ಮುತ್ತಿರುವುದು ನಮಗೆ ಅತ್ಯಂತ ಸಂತಸದ ವಿಷಯ’ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ನಾವು ಅತ್ಯಂತ ಗೌರವಿಸುವ ಮೋಹನ್ ಭಾಗವತ್ ಅವರ ಮಾರ್ಗದರ್ಶನ ಮತ್ತು ಅನುಭವದ ನುಡಿಗಳನ್ನು ಕೇಳುವ ಅವಕಾಶ ನಮಗೆ ಸಿಕ್ಕಿದೆ. ದೇಶದ ಯುವಸಮೂಹ ನಮ್ಮೊಂದಿಗೆ ಜೋಡಣೆಗೊಳ್ಳುತ್ತಾ, ನಮ್ಮ ಸಾಂಸ್ಕೃತಿಕ ಗುರುತನ್ನು ಅಪ್ಪಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದಿದ್ದಾರೆ.

ಕಂಗನಾ ಅವರ ಹಿಂದಿನ ಹೇಳಿಕೆ ಏನಾಗಿತ್ತು?

ಕೆಲವು ದಿನಗಳ ಹಿಂದೆ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪರೀಕ್ಷೆ ಸಂಬಂಧಿತ ವಿದ್ಯಾರ್ಥಿ ಪ್ರತಿಭಟನೆಗಳ ವೀಡಿಯೋಗಳನ್ನು ನೋಡಿ ಕಂಗನಾ ಆಕ್ರೋಶ ಹೊರಹಾಕಿದ್ದರು. ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ವಿರುದ್ಧ ಬಳಸಿದ ಭಾಷೆಯನ್ನು ಖಂಡಿಸಿ ಸರಣಿ ವೀಡಿಯೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ‘ನಾನು ಸಂಘಿ ಆಗಬೇಕು’: ವಿಡಿಯೋ ನೋಡಿ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು

‘ನನ್ನ ಜೀವಮಾನದಲ್ಲೇ ಇಷ್ಟೊಂದು ವಿಕಾರವನ್ನು ಒಂದೇ ಕಡೆ ನೋಡಿರಲಿಲ್ಲ. ಜೆನ್ ಜಿ ಪ್ರತಿಭಟನೆಯ ಈ ರೀಲ್ಸ್‌ಗಳನ್ನು ನೋಡಿದರೆ ವಾಂತಿ ಬರುತ್ತದೆ. ಅವರು ಬಳಸುತ್ತಿರುವ ಭಾಷೆ ಹಾಗೂ ವರ್ತನೆ ಅತ್ಯಂತ ಅಸಭ್ಯವಾಗಿದೆ. ಇಂಥವರನ್ನು ಯಾರು ಹೆತ್ತು ಸಾಕುತ್ತಿದ್ದಾರೋ ಗೊತ್ತಿಲ್ಲ?’ ಎಂದು ಕಿಡಿಕಾರಿದ್ದರು. ಅವರ ಈ ಹೇಳಿಕೆ ಸಖತ್ ವೈರಲ್ ಆಗಿತ್ತು.

‘ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಈ ಹೊಸ ಪೀಳಿಗೆಯನ್ನು ನಾನು ಜನರೇಷನ್ ಗಟಾರ್ ಎಂದು ಕರೆಯುತ್ತೇನೆ. ನೀವು ನಿಮ್ಮನ್ನು ಕ್ರಿಮಿಗಳೆಂದು ಕರೆದುಕೊಳ್ಳುತ್ತೀರಿ ಮತ್ತು ಹಾಗೆಯೇ ವರ್ತಿಸುತ್ತೀರಿ. ಇಡೀ ಜಗತ್ತಿಗೆ ನಿಮ್ಮ ಕೊಳಕನ್ನು ತೋರಿಸುತ್ತಿದ್ದೀರಿ. ಈ ವೀಡಿಯೋಗಳನ್ನು ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ನನಗೆ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 pm, Fri, 7 August 26

Loading...
Unable to load recommendations.
Follow Us