Kangana Ranaut: ಶಾಕಿಂಗ್ ವಿಚಾರ ತೆರೆದಿಟ್ಟ ಕಂಗನಾ; ಅನೇಕ ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದ ನಟಿ
Alec Baldwin: ಹಾಲಿವುಡ್ ನಟ ಅಲೆಕ್ ಬಾಲ್ಡ್ವಿನ್ ಅವರ ಕೈಯಲ್ಲಿದ್ದ ಗನ್ನಿಂದ ಚಿತ್ರೀಕರಣದ ಸಮಯದಲ್ಲಿ ಅನಿರೀಕ್ಷಿತವಾಗಿ ಗುಂಡು ಹಾರಿ ಛಾಯಾಗ್ರಾಹಕಿ ನಿಧನಗೊಂಡಕ್ಕೆ ಕಂಗನಾ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅವರು, ತಾವು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರ ಕುರಿತು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಚಿತ್ರೀಕರಣದ ಸಮಯದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಲಿವುಡ್ ನಟ ಅಲೆಕ್ ಬಾಲ್ಡ್ವಿನ್ ಅವರ ಕೈಯಲ್ಲಿದ್ದ ಗನ್ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು, ಮಹಿಳಾ ಸಿನಿಮಾಟೋಗ್ರಫರ್ ನಿಧನ ಹೊಂದಿದ್ದರು. ಇದೇ ವೇಳೆ ನಿರ್ದೇಶಕರಿಗೂ ಗಂಭೀರ ಗಾಯವಾಗಿತ್ತು. ಈ ಘಟನೆಯನ್ನು ಉದ್ದೇಶಿಸಿ ಕಂಗನಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ಇದು ಭೀಕರ ಘಟನೆ. ಚಿತ್ರಗಳ ಸಾಹಸ ದೃಶ್ಯಗಳಲ್ಲಿ ಹಾಗೂ ಗನ್, ಸಿಡಿಮದ್ದುಗಳೊಂದಿಗೆ ಕೆಲಸ ಮಾಡುವ ಎಲ್ಲರಿಗೂ ಈ ಸೂಚನೆ. ನಿಮ್ಮ ಸಣ್ಣ ತಪ್ಪುಗಳೂ ಮತ್ತೊಬ್ಬರ ಜೀವಕ್ಕೆ ಹಾನಿಯಾಗಬಹುದು’ ಎಂದು ಕಂಗನಾ ಬರೆದುಕೊಂಡಿದ್ದಾರೆ.
ಕಂಗನಾ ಇನ್ಸ್ಟಾಗ್ರಾಂನಲ್ಲಿ ಎರಡು ಸ್ಟೋರಿಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಹಾಲಿವುಡ್ ಚಿತ್ರದ ಚಿತ್ರೀಕರಣದ ಘಟನೆ ಉಲ್ಲೇಖಿಸಿದ್ದಾರೆ. ಮತ್ತೊಂದರಲ್ಲಿ ತಮ್ಮದೇ ಅನುಭವ ಹಂಚಿಕೊಂಡಿದ್ದು, ಶಾಕಿಂಗ್ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಅವರು ಬರೆಯುತ್ತಾ, ‘ಇಂದು ಚಿತ್ರದ ಶೂಟಿಂಗ್ ವೇಳೆ ಗುಂಡು ತಗುಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಎಲ್ಲಾ ಪ್ರಮುಖ ಕಲಾವಿದರಂತೆಯೇ ನನಗೂ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವಾಗ ಅಪಘಾತಗಳಾಗಿವೆ. ಅದರಲ್ಲಿ ಕೆಲವೊಂದರಲ್ಲಂತೂ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ’ ಎಂದು ಬರೆದಿದ್ದಾರೆ.
ಇಂತಹ ಘಟನೆಗಳಿಗೆ ಯಾವುದು ಕಾರಣವಾಗಬಹುದು ಎಂಬುದನ್ನೂ ಕಂಗನಾ ಬರೆದಿದ್ಧಾರೆ. ‘ಶೂಟಿಂಗ್ ವೇಳೆ ನಡೆಯುವ ಇಂತಹ ಅಪಘಾತಗಳಿಗೆ ಬೇರೆಯವರ ತಪ್ಪು ಕಾರಣವಾಗಿರಬಹುದು. ಪ್ರತಿ ವರ್ಷ ಹಲವು ಸಾಹಸ ಕಲಾವಿದರು ಹಾಗೂ ನಟರು ಚಿತ್ರೀಕರಣದ ಸೆಟ್ಗಳಲ್ಲಿ ನಿಧನ ಹೊಂದುತ್ತಾರೆ. ಇದು ಬಹಳ ದೊಡ್ಡ ತಪ್ಪು. ಭಾರತೀಯ ಚಿತರರಂಗದಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಇನ್ನಷ್ಟು ಹೆಚ್ಚಬೇಕು. ನಮ್ಮ ಚಿತ್ರರಂಗ ಈ ಕುರಿತು ಗಮನ ಹರಿಸುತ್ತದೆ ಎಂದು ನಂಬಿದ್ದೇನೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ.
2017ರಲ್ಲಿ ಕಂಗನಾ ‘ಮಣಿಕರ್ಣಿಕಾ’ ಚಿತ್ರದ ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕತ್ತಿ ಬಳಸಿ ಸಹ ನಟಿ ನಿಹಾರ್ ಪಾಂಡ್ಯಾರೊಂದಿಗೆ ಯುದ್ಧ ಮಾಡುವಾಗ ಕಂಗನಾ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದ ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಕಂಗನಾಗೆ, ಅದೇ ಚಿತ್ರದಲ್ಲಿ ಮತ್ತೊಮ್ಮೆ ಗಂಭೀರ ಗಾಯವಾಗಿತ್ತು. ಆ ಸಮಯದಲ್ಲಿ ಅವರಿಗೆ ಬಲಗಾಲು ಫ್ರಾಕ್ಚರ್ ಆಗಿತ್ತು. ಈ ಎಲ್ಲಾ ಘಟನೆಗಳ ಆಧಾರದಲ್ಲಿ ಕಂಗನಾ ಚಿತ್ರೀಕರಣದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ:
Prabhas Birthday: ‘ಬಾಹುಬಲಿ’ಗೂ ಮುನ್ನವೇ ಆಕ್ಷನ್ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಪ್ರಭಾಸ್; ಯಾವುವು ಆ ಚಿತ್ರಗಳು?
Published On - 1:30 pm, Sat, 23 October 21