ಇತ್ತೀಚೆಗೆ ಚಿತ್ರರಂಗದಲ್ಲಿ ಬಯೋಪಿಕ್ ಟ್ರೆಂಡ್ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಜನರ ಬಯೋಪಿಕ್ಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಅನೇಕರು ಯಶಸ್ಸು ಕಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಕಾಮಿಡಿಯನ್ ಕಪಿಲ್ ಶರ್ಮಾ (Kapil Sharma) ಕುರಿತು ಈಗ ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಕಪಿಲ್ ಶರ್ಮಾ ಅವರ ಆರಂಭಿಕ ಜೀವನ ಹೇಗಿತ್ತು? ಅವರು ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಹೀಗೆ ಹಲವು ವಿಚಾರಗಳ ಬಗ್ಗೆ ಈ ಬಯೋಪಿಕ್ನಲ್ಲಿ ಹೇಳಲಾಗುತ್ತದೆ. ‘ಫನ್ಕಾರ್’ (Funkaar ) ಎನ್ನುವ ಶೀರ್ಷಿಕೆಯನ್ನು ಸಿನಿಮಾಗೆ ಇಡಲಾಗಿದೆ. ಮೃಗದೀಪ್ ಸಿಂಗ್ ಲಂಬಾ (Mrighdeep Singh Lamba) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಕಪಿಲ್ ಶರ್ಮಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
‘ಫನ್ಕಾರ್’ ಎಂಬುದು ಉರ್ದು ಶಬ್ದ. ಇದರ ಅರ್ಥ ಕಲಾವಿದ ಎಂದು. ಕಪಿಲ್ ಶರ್ಮಾ ಓರ್ವ ಕಲಾವಿದ. ಈ ಕಾರಣಕ್ಕೆ ‘ಫನ್ಕಾರ್’ ಎಂದು ಇಡಲಾಗಿದೆ. ಈ ಚಿತ್ರವನ್ನು ನಿರ್ದೇಶಕರು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಮೃಗದೀಪ್ ಸಿಂಗ್ ಅವರು ‘ಫುಕ್ರೇ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಸದ್ಯ, ಅವರು ‘ಫುಕ್ರೇ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ಬಯೋಪಿಕ್ಅನ್ನು ಅವರು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
ಕಪಿಲ್ ಶರ್ಮಾ ಪಂಜಾಬ್ನ ಅಮೃತ್ಸರದವರು. ಸಾಮಾನ್ಯ ಕುಟುಂಬದಿಂದ ಬಂದು, ಈಗ ‘ದಿ ಕಪಿಲ್ ಶರ್ಮಾ ಶೋ’ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿರುವ ಹೆಚ್ಚುಗಾರಿಕೆ ಅವರದ್ದು. ಈ ಶೋಗೆ ಸಾಕಷ್ಟು ಸೆಲೆಬ್ರಿಟಿಗಳು ಅತಿಥಿಗಳಾಗಿ ಬಂದು ಹೋಗಿದ್ದಾರೆ.
2007ರಲ್ಲಿ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ನಲ್ಲಿ ಕಪಿಲ್ ಶರ್ಮಾ ಗೆದ್ದಿದ್ದರು. ನಂತರ ಹಲವು ಕಾಮಿಡಿ ಶೋಗಳಲ್ಲಿ ಅವರು ಕಾಣಿಸಿಕೊಂಡರು. 2013ರಲ್ಲಿ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಅನ್ನು ಆರಂಭಿಸಿದರು. ಈ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ವಾಹಿನಿ ಜತೆಗಿನ ಹಣದ ವ್ಯವಹಾರದಲ್ಲಿ ಹೊಂದಾಣಿಕೆ ಆಗದ ಕಾರಣ ಮೂರು ವರ್ಷದ ನಂತರ ಈ ಶೋ ಕ್ಯಾನ್ಸಲ್ ಆಯಿತು. ಸ್ವಲ್ಪ ಸಮಯದ ನಂತರ (2016) ಬೇರೆ ಚಾನೆಲ್ನಲ್ಲಿ ‘ದಿ ಕಪಿಲ್ ಶರ್ಮಾ ಶೋ’ ಆರಂಭಿಸಿದರು ಅವರು. ಅಲ್ಲಿಂದ ಇಲ್ಲಿಯವರೆಗೂ ಅವರ ಶೋ ಖ್ಯಾತಿ ಗಳಿಸಿಕೊಂಡಿದೆ. ಇದಲ್ಲದೇ, ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಕಪಿಲ್ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?
ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್ ಶರ್ಮಾ ಶೋ’ ಹಾಸ್ಯನಟ
Published On - 6:30 am, Sat, 15 January 22