ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್ ಶರ್ಮಾ ಶೋ’ ಹಾಸ್ಯನಟ
‘ದಿ ಕಪಿಲ್ ಶರ್ಮಾ ಶೋ’, ‘ಕ್ರೈಮ್ ಪೆಟ್ರೋಲ್’, ‘ಸಿಐಡಿ’ ಮೊದಲಾದವುಗಳಲ್ಲಿ ಕಾಣಿಸಿಕೊಂಡ ತೀರ್ಥನಂದ್ ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ವಿಚಾರ ತಿಳಿದ ನೆರೆಹೊರೆಯವರು ಅವರನ್ನು ಸಾವಿನ ದವಡೆಯಿಂದ ತಪ್ಪಿಸಿದ್ದಾರೆ.
ಕೊವಿಡ್ ಬಹುತೇಕರಿಗೆ ಕಷ್ಟವನ್ನೇ ನೀಡಿದೆ. ಕೊರೊನಾದಿಂದ (CoronaVirus) ಪ್ರೀತಿ ಪಾತ್ರರನ್ನು ಒಂದಷ್ಟು ಮಂದಿ ಕಳೆದುಕೊಂಡರೆ, ಇನ್ನೂ ಕೆಲವರು ಕೆಲಸ ಕಳೆದುಕೊಂಡು ಮನೆಯನ್ನೇ ಮುನ್ನಡೆಸಲಾಗದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ಅನೇಕರಿಗೆ ಕೆಲಸ ಸಿಗುತ್ತಿಲ್ಲ. ಪೋಷಕ ಪಾತ್ರ, ಹಾಸ್ಯ ಪಾತ್ರ ಮಾಡಿಕೊಂಡಿದ್ದ ಕಲಾವಿದರು ಈಗ ತುತ್ತು ಅನ್ನಕ್ಕೂ ಕಷ್ಟಪಡುವಂತಾಗಿದೆ. ಅದೇ ರೀತಿ ಹಾಸ್ಯನಟ ತೀರ್ಥನಂದ್ ರಾವ್ (Teerthanand Rao) ಕೂಡ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನೂ ಅವರು ಮಾಡಿದ್ದರು.
‘ದಿ ಕಪಿಲ್ ಶರ್ಮಾ ಶೋ’, ‘ಕ್ರೈಮ್ ಪೆಟ್ರೋಲ್’, ‘ಸಿಐಡಿ’ ಮೊದಲಾದವುಗಳಲ್ಲಿ ಕಾಣಿಸಿಕೊಂಡ ತೀರ್ಥನಂದ್ ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ವಿಚಾರ ತಿಳಿದ ನೆರೆಹೊರೆಯವರು ಅವರನ್ನು ಸಾವಿನ ದವಡೆಯಿಂದ ತಪ್ಪಿಸಿದ್ದಾರೆ. ಡಿಸೆಂಬರ್ 27ರಂದು ಈ ಘಟನೆ ನಡೆದಿದೆ. ಅವರು ಫೇಸ್ಬುಕ್ ಲೈವ್ ಬಂದು, ‘ನನಗೆ ಆರ್ಥಿಕ ಸಂಕಷ್ಟ ಇದೆ. ನನ್ನ ಬಳಿ ಜೀವನ ನಡೆಸೋಕೆ ಸಾಧ್ಯವಾಗುತ್ತಿಲ್ಲ. ನಾನು ಶೀಘ್ರವೇ ಪ್ರಾಣವನ್ನು ಕಳೆದುಕೊಳ್ಳುತ್ತೇನೆ’ ಎಂದು ಹೇಳಿದ್ದರು. ಕೊನೆಗೂ ಅವರ ರಕ್ಷಣೆ ಆಗಿದೆ.
ಈಗ ಮಾಧ್ಯಮಗಳ ಜತೆ ಮಾತನಾಡಿರುವ ತೀರ್ಥನಂದ್, ‘ಕಳೆದ ಎರಡು ವರ್ಷಗಳು ನಿಜವಾಗಿಯೂ ಕಠಿಣವಾಗಿವೆ. ನನ್ನ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನಾನು ನಿಜವಾಗಿಯೂ ಯಾವುದೇ ಉಳಿತಾಯವನ್ನು ಹೊಂದಿಲ್ಲ. ಕೆಲವೇ ಸಿನಿಮಾಗಳು ಕೈಯಲ್ಲಿವೆ. ಅವರು ನನಗೆ ಹಣ ನೀಡಿಲ್ಲ. ಒಂದು ವಡಾಪಾವ್ ತಿಂದು ದಿನ ಕಳೆದಿದ್ದಿದೆ. ಇದರಿಂದ ಹೊರಬರುವ ಏಕೈಕ ಮಾರ್ಗವೆಂದರೆ ಆತ್ಮಹತ್ಯೆ ಎಂದು ನನಗೆ ಅನ್ನಿಸಿತ್ತು’ ಎನ್ನುವ ಮೂಲಕ ಆತ್ಮಹತ್ಯೆ ನಿರ್ಧಾರದ ಬಗ್ಗೆ ವಿವರಿಸಿದ್ದಾರೆ.
‘ನಾನು ಡ್ಯಾನ್ಸರ್ ಒಬ್ಬಳನ್ನು ಮದುವೆ ಆಗಿದ್ದೆ. ಆದರೆ, ಆಕೆ ನನ್ನನ್ನು ಬಿಟ್ಟು ಈಗ ಬೇರೆಯವರನ್ನು ಮದುವೆ ಆಗಿದ್ದಾಳೆ. ಇದು ಕೂಡ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದೆ. ನಾನು ಆತ್ಮಹತ್ಯೆಯ ಆಲೋಚನೆ ಮಾಡಬಾರದಿತ್ತು. ಈಗ ನಾನು ಮತ್ತಷ್ಟು ಕುಗ್ಗಿದ್ದೇನೆ. ಇದೆಲ್ಲವೂ ಸರಿ ಆಗೋಕೆ ಮತ್ತಷ್ಟು ಸಮಯ ಬೇಕಿದೆ’ ಎಂಬುದು ತೀರ್ಥನಂದ್ ಅವರ ಮಾತು. ಸದ್ಯ, ಕೆಲ ಸೆಲೆಬ್ರಿಟಿಗಳು ಅವರ ಸಹಾಯಕ್ಕೆ ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್ ಬಾಬು ಮೆಚ್ಚುಗೆ; ಪ್ರಿನ್ಸ್ಗೆ ಧನ್ಯವಾದ ಹೇಳಿದ ಅಭಿಮಾನಿಗಳು
ಕಪಿಲ್ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?