ಆಲಿಯಾ ಭಟ್ ನನ್ನ ಮೊದಲ ಮಗಳಿದ್ದಂತೆ: ಕರಣ್ ಜೋಹರ್, ನೆಪೊಟಿಸಂ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ

|

Updated on: Sep 19, 2023 | 10:19 PM

Karan Johar: ನೆಪೊಟಿಸಂ ಗುರು ಎಂದೇ ಕರೆಯಲಾಗುವ ಕರಣ್ ಜೋಹರ್, ತಮ್ಮ ಮೇಲಿನ ಆರೋಪಗಳಿಗೆ ತೀಕ್ಷಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಆಲಿಯಾ ಭಟ್ ನನ್ನ ಮೊದಲ ಮಗಳಿದ್ದಂತೆ ಎಂದಿದ್ದಾರೆ.

ಆಲಿಯಾ ಭಟ್ ನನ್ನ ಮೊದಲ ಮಗಳಿದ್ದಂತೆ: ಕರಣ್ ಜೋಹರ್, ನೆಪೊಟಿಸಂ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ
ಕರಣ್ ಜೋಹರ್
Follow us on

ಬಾಲಿವುಡ್​ನಲ್ಲಿ (Bollywood) ನೆಪೊಟಿಸಮ್ (ಸ್ವಜನ ಪಕ್ಷಪಾತ) ಚರ್ಚೆ ಜೋರಾಗಿದೆ. ಮುಂಚಿನಿಂದಲೂ ಇದ್ದ ಈ ಚರ್ಚೆ, ಸುಶಾಂತ್ ಸಿಂಗ್ ಅಗಲಿಕೆಯ ಬಳಿಕ ಅಭಿಯಾನದ ರೀತಿ ಮಾರ್ಪಟ್ಟಿದೆ. ನೆಪೊಟಿಸಮ್​ನಿಂದಾಗಿ ಚಿತ್ರರಂಗಕ್ಕೆ ಬಂದ ನಟ-ನಟಿಯರ ಸಿನಿಮಾಗಳನ್ನು ತಿರಸ್ಕರಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ. ನೆಪೊಟಿಸಮ್ ಚರ್ಚೆ ಬಂದಾಗಲೆಲ್ಲ ಕರಣ್ ಜೋಹರ್ (Karan Johar)​ ಬಗ್ಗೆ ಮಾತು ಬಂದೇ ಬರುತ್ತದೆ. ಬಾಲಿವುಡ್​ನಲ್ಲಿ ನೆಪೊಟಿಸಂನ ಅತಿದೊಡ್ಡ ಬೆಂಬಲಿಗ, ನೆಪೊಟಿಸಂನ ಮೂಲ ಪುರುಷ ಎಂದು ಕರಣ್ ಜೋಹರ್ ಅನ್ನು ಕರೆಯಲಾಗುತ್ತದೆ. ತಮ್ಮ ಮೇಲಿನ ಆರೋಪಗಳಿಗೆ ಕರಣ್ ಜೋಹರ್ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.

”ನನ್ನನ್ನು ಏನು ಬೇಕಾದರೂ ಅನ್ನಿ, ಟೀಕೆ ಮಾಡಿರಿ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನೆಪೊಟಿಸಂ ವಿಚಾರವಾಗಿ ನಾನು ಎಂದಿಗೂ ಕ್ಷಮೆ ಕೇಳುವುದಿಲ್ಲ. ನನಗೆ ಏನು ಸರಿ ಅನ್ನಿಸುತ್ತದೆಯೋ ಅದನ್ನು ಮಾಡಿಯೇ ತೀರುತ್ತೇನೆ. ನನಗೆ ಯಾರು ಸರಿ ಎನಿಸುತ್ತಾರೆಯೋ ಅವರನ್ನೇ ಸಿನಿಮಾಕ್ಕೆ ಹಾಕಿಕೊಳ್ಳುತ್ತೇನೆ. ನಾನು ಆಯ್ಕೆ ಮಾಡುವ ನಟರು, ಯಾವುದೋ ವ್ಯಕ್ತಿಗೆ, ಕುಟುಂಬಕ್ಕೆ ಸಂಬಂಧಿಸಿದವರಾಗಿದ್ದರೆ ನಾನು ಏನೂ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಆಲಿಯಾ ಭಟ್ ಬಗ್ಗೆ ಮಾತನಾಡಿ, ”ಆಲಿಯಾ ಭಟ್ ನನ್ನ ಮೊದಲ ಮಗಳಿದ್ದಹಾಗೆ. ನಾನು ಆಕೆಯನ್ನು ಬಹಳ ಮೆಚ್ಚಿಕೊಳ್ಳುತ್ತೇನೆ. ಖಾಸಗಿಯಾಗಿಯೂ ಅಷ್ಟೆ, ಸಾರ್ವಜನಿಕ ಜೀವನದಲ್ಲಿಯೂ ಅಷ್ಟೆ ಆಕೆಯ ವ್ಯಕ್ತಿತ್ವ ನನಗೆ ಬಹಳ ಇಷ್ಟ. ಆಲಿಯಾ ಭಟ್ ನನ್ನ ಜೀವನದ ಭಾಗವೇ ಆಗಿ ಹೋಗಿದ್ದಾಳೆ” ಎಂದಿದ್ದಾರೆ. ಆಲಿಯಾ ಭಟ್, ಕರಣ್ ಜೋಹರ್​ರ ಸಿನಿಮಾ ‘ಸ್ಟುಡೆಂಟ್ ಆಫ್​ ದಿ ಇಯರ್’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಮಹೇಶ್ ಭಟ್ ಪುತ್ರಿಯಾಗಿದ್ದ ಕಾರಣದಿಂದಲೇ ಕರಣ್, ಆಲಿಯಾರನ್ನು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು ಎನ್ನಲಾಗುತ್ತದೆ.

ಇದನ್ನೂ ಓದಿ: ಜೀವ ಬೆದರಿಕೆ ಬಂದಾಗ ಬೆಂಬಲಿಸಿದ್ದು ಶಾರುಖ್ ಖಾನ್: ಕರಣ್ ಜೋಹರ್

ಕರಣ್ ಜೋಹರ್, ಬಾಲಿವುಡ್​ನ ನೆಪೊಟಿಸಂ ಗುರು ಎನ್ನಲಾಗುತ್ತದೆ. ಬಹುತೇಕ ಸ್ಟಾರ್ ನಟ, ನಟಿಯರ ಮಕ್ಕಳನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿರುವುದು ಕರಣ್ ಜೋಹರ್. ಆಲಿಯಾ ಬಟ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ, ಅನನ್ಯಾ ಪಾಂಡೆ, ಜಾನ್ಹವಿ ಕಪೂರ್, ತಾರಾ ಸುತಾರಿಯಾ ಇನ್ನೂ ಹಲವು ನಟರ ಮಕ್ಕಳನ್ನು ಕರಣ್ ಜೋಹರ್ ಲಾಂಚ್ ಮಾಡಿದ್ದಾರೆ. ಸೈಫ್ ಅಲಿ ಖಾನ್ ಪುತ್ರನನ್ನೂ ಕರಣ್ ಜೋಹರ್ ಲಾಂಚ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವು ನಟ-ನಟಿಯರ ಮಕ್ಕಳನ್ನು ಕರಣ್ ಜೋಹರ್ ಲಾಂಚ್ ಮಾಡುವವರಿದ್ದಾರೆ.

ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್, ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ಹಲವು ಸಿನಿಮಾಗಳಲ್ಲಿ ಹೂಡಿಕೆ ಸಹ ಮಾಡಿದ್ದಾರೆ. ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ಕರಣ್ ಜೋಹರ್ ಹೂಡಿಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ