ಖ್ಯಾತ ಗಾಯಕ ಕೆಕೆ ಅವರ ನಿಧನದ (KK Death) ಹಿಂದೆ ಅನೇಕ ಅನುಮಾನಗಳು ಮೂಡಿವೆ. ಮಂಗಳವಾರ (ಮೇ 31) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಅವರು ಏಕಾಏಕಿ ಅಸ್ವಸ್ಥರಾದರು. ಬಳಿಕ ಅವರಿಗೆ ಹೃದಯಾಘಾತ ಆಯಿತು ಎಂಬ ಪ್ರಾಥಮಿಕ ವರದಿ ಲಭ್ಯವಾಗಿದೆ. ಆದರೆ ಕೆಕೆ (ಕೃಷ್ಣಕುಮಾರ್ ಕುನ್ನರ್) ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೆಕೆ ನಿಧನದ ಬಳಿಕ ಕೆಲವು ವಿಡಿಯೋಗಳು (KK viral Video) ವೈರಲ್ ಆಗಿವೆ. ಕಾರ್ಯಕ್ರಮದ ಆಯೋಜಕರ ಎಡವಟ್ಟಿನಿಂದಲೇ ಈ ಸಾವು ಸಂಭವಿಸಿದೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ವೇದಿಕೆಯಲ್ಲಿ ಹಾಡುವಾಗ ಕೆಕೆ ಅವರು ವಿಪರೀತ ಬೆವರುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರನ್ನು ಹೋಟೆಲ್ಗೆ ಕಳಿಸಿಕೊಡಲಾಯಿತು. ಕೆಕೆ (Krishnakumar Kunnath) ಅವರು ವೇದಿಕೆ ತೊರೆದ ಕೊನೇ ಕ್ಷಣದ ವಿಡಿಯೋ ಈಗ ವೈರಲ್ ಆಗಿದೆ.
ತೀವ್ರವಾಗಿ ಸೆಕೆ ಆಗಿದ್ದರಿಂದ ಕೆಕೆ ಅವರು ಕಾರ್ಯಕ್ರಮದ ನಡುವೆ ಬ್ರೇಕ್ ತೆಗೆದುಕೊಂಡಿದ್ದರು. ಮುಖ ಒರೆಸಿಕೊಂಡು ಅವರು ಮತ್ತೆ ಮೈಕ್ ಹಿಡಿದರು. ಆದರೆ ಅಲ್ಲಿನ ವಾತಾವರಣ ಅವರಿಗೆ ಹಿಡಿಸಲಿಲ್ಲ. ‘ತುಂಬ ಸೆಕೆ ಇದೆ’ ಎಂದು ಜನರು ಮಾತನಾಡಿಕೊಳ್ಳುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕೇಳಿಸಿದೆ. ಕಳಪೆ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಆಗಿದ್ದರಿಂದ ಈ ರೀತಿ ಆಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
(ಇಲ್ಲಿದೆ ವೈರಲ್ ವಿಡಿಯೋ)
ಕೆಕೆ ಅವರ ಸಾವಿಗೆ ಸೂಕ್ತ ಕಾರಣ ಏನು ಎಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಅದಕ್ಕೂ ಮುನ್ನವೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೆಕೆ ಅವರದ್ದು ಅಸಹಜ ಸಾವು ಆಗಿರಬಹುದು ಎಂಬ ಗುಮಾನಿ ಕೂಡ ವ್ಯಕ್ತವಾಗುತ್ತಿದೆ.
ಅಸಹಜ ಸಾವು ಪ್ರಕರಣ ದಾಖಲು:
ಕೆಕೆ ಅವರ ಮುಖ ಮತ್ತು ತಲೆಯಲ್ಲಿ ಗಾಯದ ಗುರುತುಗಳು ಇವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಸಂಗೀತ ಕಾರ್ಯಕ್ರಮದ ವೇಳೆ ಕೆಕೆ ಅವರು ಹಲವು ಬಾರಿ ವೇದಿಕೆಯ ಹಿಂಭಾಗಕ್ಕೆ ತೆರಳಿದ್ದರು ಎಂಬ ಮಾಹಿತಿ ಕೂಡ ಕೇಳಿಬಂದಿದೆ.
ಇಂದು (ಜೂನ್ 1) ಕೋಲ್ಕತ್ತಾದ ಎಸ್ಎಸ್ಕೆಎಮ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೆಕೆ ಅವರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾವಿಗೆ ಅಸಲಿ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ಆರಂಭ ಆಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.