ಬಾಲಿವುಡ್ಗೆ ಪದಾರ್ಪಣೆ ಮಾಡಲಿರುವ ಮತ್ತೊಬ್ಬ ಕರ್ನಾಟಕ ಮೂಲದ ನಟಿ
Krithi Shetty: ಕರ್ನಾಟಕ ಮೂಲದ ಕೆಲವು ನಟಿಯರು ಈಗಾಗಲೇ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಇದೀಗ ಮತ್ತೊಬ್ಬ ಕರ್ನಾಟಕ ಮೂಲದ ನಟಿ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.
ಕರ್ನಾಟಕ ಮೂಲದ ನಟಿಯರು ಸಾಲು ಸಾಲಾಗಿ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಹೀಗೆ ಮಿಂಚುತ್ತಿರುವುದು ಇದು ಮೊದಲೇನೂ ಅಲ್ಲ. ಈಗಾಗಲೇ ಹಲವು ಕರ್ನಾಟಕ ಮೂಲದ ನಟಿಯರು ಪರಭಾಷೆಗಳಲ್ಲಿ ಮಿಂಚಿದ್ದಿದೆ. ಇದೀಗ ಈ ಸಾಲಿಗೆ ಮತ್ತೊಬ್ಬ ನಟಿಯ ಸೇರ್ಪಡೆಯಾಗಿದೆ. ಮಂಗಳೂರು ಮೂಲದ ಕೃತಿ ಶೆಟ್ಟಿ ಇದೀಗ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ. ಈಕೆ ಕನ್ನಡದ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲವಾದರೂ, ಕರ್ನಾಟಕ ಮೂಲದ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ.
ಹಾಸನದಲ್ಲಿ ಜನಿಸಿದ ಕೃತಿ ಶೆಟ್ಟಿ ಬೆಳೆದಿದ್ದು ಬಹುತೇಕ ಮುಂಬೈನಲ್ಲಿಯೇ, ಬಂಟ ಕುಟುಂಬದ ಈ ಚೆಲುವೆಯ ತಂದೆ ಮುಂಬೈನಲ್ಲಿ ಉದ್ಯಮಿ, ತಾಯಿ ಫ್ಯಾಷನ್ ಡಿಸೈನರ್. ಎಳವೆಯಿಂದಲೂ ನೃತ್ಯ, ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಕೃತಿ ಶೆಟ್ಟಿ, ಕಾಲೇಜು ಮೆಟ್ಟಿಲು ಹತ್ತುವ ಸಮಯದಲ್ಲಿಯೇ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಮಾತ್ರವಲ್ಲದೆ ಹೃತಿಕ್ ರೋಷನ್ ನಟಿಸಿದ್ದ ‘ಸೂಪರ್ 30’ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:20ನೇ ವಯಸ್ಸಿಗೆ ತಾಯಿ ಪಾತ್ರದಲ್ಲಿ ನಟಿಸಿದ ಕೃತಿ ಶೆಟ್ಟಿ
ಆದರೆ ನಾಯಕಿಯಾಗಿ ಪರಿಚಯವಾಗಿದ್ದು ಮಾತ್ರ ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ. 2021 ರಲ್ಲಿ ಬಿಡುಗಡೆ ಆದ ‘ಉಪ್ಪೆನ’ ಸಿನಿಮಾ, ಕೋವಿಡ್ ನಿಯಮಗಳ ನಡುವೆಯೂ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಕೃತಿಯ ಅಂದದ ಜೊತೆಗೆ ಆಕೆಯ ನಟನೆಗೂ ತೀವ್ರ ಪ್ರಶಂಸೆ ವ್ಯಕ್ತವಾಗಿತ್ತು. ಅದಾದ ಬಳಿಕ, ನ್ಯಾಚುರಲ್ ಸ್ಟಾರ್ ನಾನಿ, ನಾಗ ಚೈತನ್ಯ, ನಿತಿನ್, ರಾಮ್ ಪೋತಿನೇನಿ ಇನ್ನೂ ಕೆಲವು ಸ್ಟಾರ್ ನಟರೊಡನೆ ಸಿನಿಮಾಗಳನ್ನು ಮಾಡಿದರು. ಈಗಲೂ ಸಹ ಕೃತಿ ಕೈಯಲ್ಲಿ ಒಂದು ಮಲಯಾಳಂ ಹಾಗೂ ಮೂರು ತಮಿಳು ಸಿನಿಮಾಗಳಿವೆ. ಇದರ ನಡುವೆ ಕೃತಿ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಕೃತಿ ಶೆಟ್ಟಿ, ವರುಣ್ ಧವನ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ವರುಣ್ ಧವನ್ರ ಹೊಸ ಸಿನಿಮಾವನ್ನು ಅವರ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದು, ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಕೃತಿ ಶೆಟ್ಟಿ ಬಾಲಿವುಡ್ಗೆ ಪದಾರ್ಪಣೆ ಮಾಡುವ ಸುದ್ದಿ ಹೊರಬೀಳುತ್ತಿದ್ದಂತೆ ನಟಿ ಸಹ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಮೂಲಗಳ ಪ್ರಕಾರ ಕೃತಿ ಹಾಗೂ ವರುಣ್ ಧವನ್ರ ಹೊಸ ಸಿನಿಮಾದ ಮುಹೂರ್ತ ಶೀಘ್ರವೇ ನಡೆಯಲಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Wed, 4 September 24