ಕೃತಿ ಸನನ್ ಜಾಹೀರಾತು ವಿವಾದ: ಸಿಬ್ಬಂದಿ ಸುರಕ್ಷತೆಗಾಗಿ ವಿಡಿಯೋ ಹಿಂಪಡೆದ ಕಂಪನಿ

ನಟಿ ಕೃತಿ ಸನನ್ ಅಭಿನಯಿಸಿದ್ದ ಹೊಸ ಜಾಹೀರಾತು ಸಖತ್ ವಿವಾದಕ್ಕೆ ಕಾರಣವಾದ ಬಳಿಕ ಅದನ್ನು ತೆಗೆದುಹಾಕಲಾಯಿತು. ಆ ನಿರ್ಧಾರಕ್ಕೆ ಅಸಲಿ ಕಾರಣ ಏನು ಎಂಬುದನ್ನು ಆ ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ. ವಿವಾದ ಹೆಚ್ಚಾದ ಬಳಿಕ ತಮ್ಮ ಸಿಬ್ಬಂದಿಗೆ ಅಭದ್ರತೆಯ ವಾತಾವರಣ ಸೃಷ್ಟಿ ಆಗಿತ್ತು ಎಂದು ಅವರು ಹೇಳಿದ್ದಾರೆ.

ಕೃತಿ ಸನನ್ ಜಾಹೀರಾತು ವಿವಾದ: ಸಿಬ್ಬಂದಿ ಸುರಕ್ಷತೆಗಾಗಿ ವಿಡಿಯೋ ಹಿಂಪಡೆದ ಕಂಪನಿ
Ishendra Agarwal Statement, Kriti Sanon

Updated on: Aug 30, 2026 | 7:09 AM

ಖ್ಯಾತ ನಟಿ ಕೃತಿ ಸನನ್ ಅಭಿನಯದ ಖಾಸಗಿ ಆಭರಣ ಸಂಸ್ಥೆಯ ರಕ್ಷಾ ಬಂಧನ ಶುಭಾಶಯದ (Raksha Bandhan) ಜಾಹೀರಾತು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಜಾಹೀರಾತಿನಲ್ಲಿ ಕೃತಿ ಸನನ್ (Kriti Sanon) ತೊಟ್ಟಿದ್ದ ಉಡುಪು ಮತ್ತು ಕೆಲವು ದೃಶ್ಯಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸ್ಥೆಯು ಜಾಹೀರಾತನ್ನು ಹಿಂಪಡೆದಿತ್ತು. ಇದೀಗ ಜಾಹೀರಾತು (Kriti Sanon Ad) ತೆಗೆದುಹಾಕಲು ನಿಜವಾದ ಕಾರಣವೇನೆಂಬುದನ್ನು ಆ ಸಂಸ್ಥೆಯ ಸಂಸ್ಥಾಪಕ ಇಶೇಂದ್ರ ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಸಂಸ್ಥೆಯು ಬ್ರ್ಯಾಂಡ್ ಸಂದೇಶದಿಂದ ಹಿಂದೆ ಸರಿದಿಲ್ಲ, ಬದಲಿಗೆ ತಮ್ಮ ನೌಕರರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

‘ನಮ್ಮ ರಕ್ಷಾಬಂಧನ ಪ್ರಚಾರ ಅಭಿಯಾನದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ನಾನು ಗಮನಿಸಿದ್ದೇನೆ. ಕೃತಿ ಅವರೊಂದಿಗೆ ಸೇರಿ ರೂಪಿಸಿದ ಈ ಜಾಹೀರಾತಿನ ಉದ್ದೇಶ ಕುಟುಂಬಗಳನ್ನು ಒಂದಾಗಿಸುವುದಾಗಿತ್ತು. ಆ ಉದ್ದೇಶದಲ್ಲಿ ನಮಗೆ ಮತ್ತು ಕೃತಿ ಅವರಿಗೆ ಈಗಲೂ ಸಂಪೂರ್ಣ ನಂಬಿಕೆಯಿದೆ. ಕೆಲವು ಮಳಿಗೆಗಳ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಅಲ್ಲಿ ಕಾರ್ಯನಿರ್ವಹಿಸುವ ನಮ್ಮ ಆನ್-ಗ್ರೌಂಡ್ ಸಿಬ್ಬಂದಿಗೆ ಅಭದ್ರತೆಯ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ನಮ್ಮ ನೌಕರರ ಭೌತಿಕ ಸುರಕ್ಷತೆ ಮತ್ತು ಮಳಿಗೆಗಳ ರಕ್ಷಣೆ ನಮಗೆ ಅತ್ಯಂತ ಪ್ರಮುಖ ಆದ್ಯತೆಯಾಗಿತ್ತು. ಅವರ ಸುರಕ್ಷತೆಗೆ ಧಕ್ಕೆಯಾಗುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ’ ಎಂದು ಇಶೇಂದ್ರ ಅಗರ್‌ವಾಲ್ ವಿವರಿಸಿದ್ದಾರೆ.

ವಿವಾದಕ್ಕೆ ಕಾರಣವೇನು?

ರಕ್ಷಾಬಂಧನ ಹಬ್ಬದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಈ ಜಾಹೀರಾತಿನಲ್ಲಿ ಕೃತಿ ಸನನ್ ಅವರು ಬ್ರಾಲೆಟ್ ಮತ್ತು ಸ್ಕರ್ಟ್ ಧರಿಸಿ ತಮ್ಮ ಸಹೋದರನಿಗೆ ರಾಖಿ ಕಟ್ಟುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದೂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಇಂತಹ ಉಡುಪು ಧರಿಸುವುದು ಸಂಸ್ಕೃತಿಗೆ ಸೂಕ್ತವಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಅಲ್ಲದೆ, ಜಾಹೀರಾತಿನಲ್ಲಿ ಸಾಕು ನಾಯಿಗೂ ರಾಖಿ ಕಟ್ಟುವುದು ತೋರಿಸಲ್ಪಟ್ಟಿತ್ತು, ಇದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.

ರಾಜಕೀಯ ಸ್ವರೂಪ ಪಡೆದ ವಿಡಿಯೋ

ಈ ವಿಷಯವು ಶೀಘ್ರದಲ್ಲೇ ರಾಜಕೀಯ ವಲಯದಲ್ಲೂ ಸದ್ದು ಮಾಡಿತು. ಬಿಜೆಪಿ ಸಂಸದೆ ಕಂಗನಾ ರಣಾವತ್ ಸೇರಿದಂತೆ ಹಲವು ರಾಜಕಾರಣಿಗಳು ಈ ಜಾಹೀರಾತಿನ ಶೈಲಿಯನ್ನು ಬಹಿರಂಗವಾಗಿ ಖಂಡಿಸಿದ್ದರು. ಆದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಟಿ ಕೃತಿ ಸನನ್ ಬೆಂಬಲಕ್ಕೆ ನಿಂತಿದ್ದರು.

ಇದನ್ನೂ ಓದಿ: ಕೃತಿ ಸನನ್ ಮಾಡಿದರೆ ತಪ್ಪು, ಕಂಗನಾ ಮಾಡಿದರೆ ಸರಿಯೇ? ನೆಟ್ಟಿಗರ ಪ್ರಶ್ನೆ

ಸಂಸ್ಥೆಯು ಈ ಮುಂಚೆಯೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ‘ನಾವು ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳಿಗೆ ಅಪಾರ ಗೌರವ ನೀಡುತ್ತೇವೆ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನಮ್ಮ ಉದ್ದೇಶವಾಗಿರಲಿಲ್ಲ. ಸಾರ್ವಜನಿಕರ ಭಾವನೆಗೆ ಗೌರವ ನೀಡಿ ಜಾಹೀರಾತನ್ನು ಹಿಂಪಡೆಯುತ್ತಿದ್ದೇವೆ’ ಎಂದು ಕ್ಷಮೆ ಯಾಚಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us