ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪೊಲೀಸರ ವಶದಲ್ಲಿದ್ದಾನೆ. ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡುವಲ್ಲಿ ಈತನ ಕೈವಾಡ ಇದೆ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಲಾರೆನ್ಸ್ ವಿಚಾರಣೆ ಮಾಡಲಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಅವರನ್ನು ಹತ್ಯೆ ಮಾಡಲು ಈತ ಸಂಚು ರೂಪಿಸಿದ ವಿಚಾರವನ್ನು ಬಿಚ್ಚಿಟ್ಟಿದ್ದಾನೆ. ಇದಕ್ಕಾಗಿ ಆತ 4 ಲಕ್ಷ ರೂಪಾಯಿ ಗನ್ ಕೂಡ ಖರೀದಿ ಮಾಡಿದ್ದ.
1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್ಗಾಗಿ ಸಲ್ಮಾನ್ ಖಾನ್ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು. ಅವರು ಸಿನಿಮಾ ತಂಡದ ಕೆಲವರ ಜತೆ ಸಫಾರಿಗೆ ಹೋಗಿದ್ದರು. ಆ ಸಮಯದಲ್ಲಿ ಸಲ್ಮಾನ್ ಖಾನ್ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಈ ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ಈ ಪ್ರಕರಣದಲ್ಲಿ ಹಗೆ ತೀರಿಸಿಕೊಳ್ಳಲು ಲಾರೆನ್ಸ್ ಸಂಚು ರೂಪಿಸಿದ್ದ ಎನ್ನಲಾಗಿದೆ.
ಬಿಷ್ಣೋಯ್ ಸಮುದಾಯದವರು ಪ್ರಕೃತಿ ಆರಾಧಕರು. ವನ್ಯಜೀವಿ ಸಂರಕ್ಷಣೆಗಾಗಿ ಅವರು ಪ್ರಾಣವನ್ನು ಬೇಕಾದರೂ ನೀಡುತ್ತಾರೆ. ಜೋಧಪುರ್ನ ಬಿಷ್ಣೋಯ್ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಈ ಪ್ರಾಣಿಯನ್ನು ಕೊಲ್ಲುವುದನ್ನು ಅಥವಾ ಮರವನ್ನು ಕಡಿಯುವುದನ್ನು ಬಿಷ್ಣೋಯ್ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದರು.
ಇದನ್ನೂ ಓದಿ: ಸಲ್ಮಾನ್ ಖಾನ್ ‘ಹಿಟ್ ಆಂಡ್ ರನ್’ ಪ್ರಕರಣವನ್ನು ಹೋಲುವ ‘ಸೆಲ್ಮೋನ್ ಭಾಯಿ’ ಗೇಮ್ಗೆ ಕೋರ್ಟ್ ತಡೆ; ಏನಿದು ಪ್ರಕರಣ?
2018ರಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡುವಂತೆ ಸಂಪತ್ ನೆಹ್ರಾಗೆ ಲಾರೆನ್ಸ್ ಸೂಚನೆ ನೀಡಿದ್ದ. ಸಂಪತ್ನನ್ನು ಮುಂಬೈಗೆ ಕಳುಹಿಸಲಾಗಿತ್ತು. ಸಲ್ಮಾನ್ ಖಾನ್ ಮನೆಯ ಸಮೀಪ ಸಂಪತ್ ಸಾಕಷ್ಟು ಸುತ್ತಾಟ ನಡೆಸಿದ್ದ. ಆತನ ಬಳಿ ಸಣ್ಣ ಗನ್ ಮಾತ್ರ ಇತ್ತು. ದೂರದಿಂದ ಈ ಗನ್ನಲ್ಲಿ ಶೂಟ್ ಮಾಡುವುದು ಅಸಾಧ್ಯವಾಗಿತ್ತು. ಹೀಗಾಗಿ, ದಿನೇಶ್ ದಗಾರ್ ಮೂಲಕ ನಾಲ್ಕು ಲಕ್ಷ ರೂಪಾಯಿ ಗನ್ ಖರೀದಿ ಮಾಡಲಾಗಿತ್ತು. ದಿನೇಶ್ ಬಂಧನದ ವೇಳೆ ಈ ಗನ್ ವಶಕ್ಕೆ ಪಡೆಯಲಾಯಿತು. ಇದನ್ನು ಸಲ್ಮಾನ್ ಖಾನ್ ಹತ್ಯೆ ಮಾಡಲೆಂದೇ ಖರೀದಿ ಮಾಡಲಾಗಿತ್ತು ಎಂಬ ವಿಚಾರ ಈಗ ಗೊತ್ತಾಗಿದೆ.
Published On - 9:45 pm, Tue, 12 July 22