ವಿವಾದಾತ್ಮಕ ಮಹಿಳೆಯ ಪಾತ್ರದಲ್ಲಿ ಆಲಿಯಾ ಭಟ್ ಅಥವಾ ಪ್ರಿಯಾಂಕಾ ಚೋಪ್ರಾ
Ma Anand Sheela: ಭಾರತದ ಅತ್ಯಂತ ವಿವಾದಾತ್ಮಕ ಮಹಿಳೆಯರಲ್ಲಿ ಮಾ ಆನಂದ್ ಶೀಲಾ ಸಹ ಒಬ್ಬರು. ಓಶೋ ಅವರ ಅತ್ಯಂತ ಆಪ್ತೆ ಎನಿಸಿಕೊಂಡಿದ್ದ ಶೀಲಾ ಆ ನಂತರ ಕೊಲೆ ಆರೋಪ ಹೊತ್ತುಕೊಂಡರು. ಓಶೋ ಹಾಗೂ ಶೀಲಾ ನಡುವಿನ ಸಂಬಂಧದ ಬಗ್ಗೆ ಹಲವು ಕತೆಗಳು ಹುಟ್ಟುಕೊಂಡವು. ಇದೀಗ ಆನಂದ್ ಶೀಲಾ ಜೀವನ ಕುರಿತ ಸಿನಿಮಾದಲ್ಲಿ ಯಾರು ನಟಿಸಬೇಕು ಎಂಬ ಚರ್ಚೆ ಹುಟ್ಟುಕೊಂಡಿದೆ. ಶೀಲಾ ಅವರೇ ಇದಕ್ಕೆ ಉತ್ತರ ನೀಡಿದ್ದಾರೆ.

ಆಚಾರ್ಯ ರಜನೀಶ್ (Acharya Rajaneesh) ಅಥವಾ ಓಶೊ (Osho) ಎಂದು ಕರೆಯಲಾಗುತ್ತಿದ್ದ ತತ್ವಜ್ಞಾನಿ, ಸೆಲೆಬ್ರಿಟಿ ಸ್ವಾಮೀಜಿಯ ಕುರಿತು ಈಗಾಗಲೇ ಕೆಲವು ಡಾಕ್ಯುಮೆಂಟರಿ ಸಿನಿಮಾಗಳು ಬಂದಿವೆ. ಓಶೋ ಭಾರಿ ಸಂಖ್ಯೆಯ ಅನುಯಾಯಿಗಳನ್ನು ದೇಶ, ವಿದೇಶಗಳಲ್ಲಿ ಹೊಂದಿದ್ದರು. ಓಶೋ ಅವರ ಹತ್ತಿರದ ಅವರ ಬಲು ನಂಬುಗೆಯ ವ್ಯಕ್ತಿಯಾಗಿದ್ದವರು ಮಾ ಆನಂದ ಶೀಲಾ. ಆನಂದ ಶೀಲಾ (Ma Anand Sheela) ಹಾಗೂ ಓಶೋ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ವಿವಾದಗಳು ಸಹ ಆಗಿದ್ದವು. ಆ ನಂತರ ಇಬ್ಬರು ದೂರಾದರು. ಓಶೋಗೆ ನನ್ನ ಮೇಲೆ ಪ್ರೀತಿ ಇತ್ತು ಎಂದು ಶೀಲಾ ಹೇಳಿದರೆ, ಶೀಲಾ ಒಬ್ಬ ಕೊಲೆಪಾತಕಿ ಎಂದು ಅಬ್ಬರಿಸಿದ್ದರು ಓಶೋ. ಇದೀಗ ಮಾ ಆನಂದ ಶೀಲಾ ಅವರು ಸಂದರ್ಶನವೊಂದನ್ನು ನೀಡಿದ್ದು, ಸಂದರ್ಶನದಲ್ಲಿ ತಮ್ಮ ಜೀವನದ ಬಗೆಗಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಮಾ ಆನಂದ ಶೀಲಾ ಜೀವನದ ಬಗ್ಗೆ ಈಗಾಗಲೇ ‘ಸರ್ಚಿಂಗ್ ಫಾರ್ ಶೀಲಾ’ ಹೆಸರಿನ ಡಾಕ್ಯುಮೆಂಟರಿ ಈಗಾಗಲೇ ನಿರ್ಮಾಣವಾಗಿ ಬಿಡುಗಡೆ ಸಹ ಆಗಿದೆ. ‘ಕಪೂರ್ ಆಂಡ್ ಸನ್ಸ್’ ಇನ್ನಿತರೆ ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಶಕುನ್ ಬಾಟ್ರಾ ಅವರು ಶೀಲಾ ಅವರ ಜೀವನ ಕುರಿತಾದ ಕಮರ್ಶಿಯಲ್ ಸಿನಿಮಾ ಮಾಡುವ ಬಗ್ಗೆ ಈ ಹಿಂದೆಯೇ ಆನಂದ ಶೀಲಾ ಅವರೊಟ್ಟಿಗೆ ಚರ್ಚೆ ಸಹ ಮಾಡಿದ್ದರಂತೆ. ಶೀಲಾ ಅವರು ಅದಕ್ಕೆ ಒಪ್ಪಿಗೆ ಸಹ ನೀಡಿದ್ದರು.
ಆದರೆ ಆ ಪ್ರಾಜೆಕ್ಟ್ಗೆ ನಿರ್ಮಾಪಕರು ಸಿಗಲಿಲ್ಲವಂತೆ. ಈ ಬಗ್ಗೆ ಮಾತನಾಡಿರುವ ಶೀಲಾ, ನನ್ನ ಪಾತ್ರಕ್ಕೆ ಆಲಿಯಾ ಭಟ್ ಸೂಕ್ತ ಎನಿಸುತ್ತದೆ. ಆ ವಯಸ್ಸಿನಲ್ಲಿ ನಾನು ಆಲಿಯಾ ಭಟ್ ರೀತಿಯೇ ಇದ್ದೆ. ನಾನು ಆಲಿಯಾ ಭಟ್ನ ಸಿನಿಮಾಗಳ ಕೆಲ ದೃಶ್ಯಗಳನ್ನು ನೋಡಿದ್ದೇನೆ. ನನ್ನ ತಂಗಿಗೆ ಈ ಬಗ್ಗೆ ಹೇಳಿದಾಗ ಆಕೆಯೂ ಸಹ ಅದನ್ನು ಒಪ್ಪಿಕೊಂಡರು. ನನ್ನ ಪಾತ್ರವನ್ನು ಆಲಿಯಾ ನಟಿಸಿದರೆ ಒಳ್ಳೆಯದು ಅನಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಬಾಲಿವುಡ್ನ ಶ್ರೀಮಂತ ನಟಿ ಆಲಿಯಾ ಭಟ್ ಆಸ್ತಿ ಎಷ್ಟು ಕೋಟಿ?
ಈ ಹಿಂದೆ ಅಮೆಜಾನ್ ಪ್ರೈಂ ಶೀಲಾ ಅವರ ಜೀವನದ ವೆಬ್ ಸರಣಿ ಮಾಡಲು ಮುಂದಾಗಿತ್ತು, ಪ್ರಿಯಾಂಕಾ ಚೋಪ್ರಾ ಶೀಲಾ ಪಾತ್ರದಲ್ಲಿ ನಟಿಸಲಿದ್ದರು. ಆದರೆ ಶೀಲಾ ಅವರಿಗೆ ಅದು ಇಷ್ಟವಾಗಲಿಲ್ಲ. ಪ್ರಿಯಾಂಕಾ ಚೋಪ್ರಾಗೆ ಆಗ ನೊಟೀಸ್ ಕಳಿಸಿದ್ದರು ಶೀಲಾ. ಆಗ ನನಗೆ ಅದು ಸರಿ ಬರಲಿಲ್ಲ. ಏಕೆಂದರೆ ಯಾರೇ ನನ್ನ ಪಾತ್ರ ಮಾಡುವುದಿದ್ದರೂ ಮೊದಲು ನನ್ನ ಅನುಮತಿ ಪಡೆಯಬೇಕು, ಆದರೆ ಪ್ರಿಯಾಂಕಾ ಆ ಬಗ್ಗೆ ನನ್ನ ಬಳಿ ಮಾತನಾಡಿರಲಿಲ್ಲ. ಆದರೆ ಈಗ ಪ್ರಾಜೆಕ್ಟ್ ಟೇಕ್ ಆಫ್ ಆಗುವುದೇ ಕಷ್ಟದಲ್ಲಿದೆ, ಈಗ ಅದೆಲ್ಲ ಮುಖ್ಯ ವಿಷಯ ಆಗುವುದಿಲ್ಲ ಯಾರಾದರೂ ನನ್ನ ಪಾತ್ರದಲ್ಲಿ ನಟಿಸಲಿ’ ಎಂದಿದ್ದಾರೆ ಶೀಲಾ.
ಮಾ ಆನಂದ ಶೀಲಾ ಅವರ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರಾಜೇಶ್ ಖನ್ನಾ ಅವರು ಓಶೋ ಆಶ್ರಮದಲ್ಲಿ ಇದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲಿ ಅವರು ಅತೃಪ್ತಿ ಮತ್ತು ಮದ್ಯದ ಸಮಸ್ಯೆಯಿಂದ ಒದ್ದಾಡುತ್ತಿದ್ದರು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ