ಖ್ಯಾತ ನಟಿ ಮಧುಬಾಲಾ ಬಯೋಪಿಕ್ ಘೋಷಣೆ; ಯಾರು ಮಾಡ್ತಾರೆ ನಿರ್ದೇಶನ?
ನಟಿ ಮಧುಬಾಲಾ ಅವರ ಬದುಕಿನ ವಿವರಗಳು ಯಾವ ಸಿನಿಮಾದ ಕಥೆಗೂ ಕಡಿಮೆ ಇಲ್ಲ. ಅವರ ಬಯೋಪಿಕ್ ಬಗ್ಗೆ ಈಗ ಅಧಿಕೃತ ಘೋಷಣೆ ಆಗಿದೆ. ಮಧುಬಾಲಾ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿಯೇ ಉಳಿದುಕೊಂಡಿದೆ. ಈ ಸಿನಿಮಾ ಬಗ್ಗೆ ಮಧುಬಾಲಾ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟಿ ಮಧುಬಾಲಾ (Madhubala) ಅವರ ಬದುಕಿನ ವಿವರವನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗಲಿದೆ ಎಂದು ಹಲವು ದಿನಗಳಿಂದ ಹೇಳಲಾಗುತ್ತಿತ್ತು. ಆ ಸುದ್ದಿಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ. ಮಧುಬಾಲಾ ಬಯೋಪಿಕ್ಗೆ (Madhubala Biopic) ಯಾರು ನಿರ್ದೇಶನ ಮಾಡುತ್ತಾರೆ? ಯಾರು ನಿರ್ಮಾಣ ಮಾಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕಿದೆ. ಜಸ್ಮೀತ್ ಕೆ. ರೀನ್ (Jasmeet K, Reen) ಅವರ ನಿರ್ದೇಶನದಲ್ಲಿ ಮಧುಬಾಲಾ ಬಯೋಪಿಕ್ ಮೂಡಿಬರಲಿದೆ. ‘ಸೋನಿ ಪಿಕ್ಚರ್ಸ್ ಇಂಟರ್ನ್ಯಾಷಲ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.
ನಿರ್ದೇಶಕಿ ಜಸ್ಮೀತ್ ಕೆ. ರೀನ್ ಅವರು ‘ಡಾರ್ಲಿಂಗ್ಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಗುರುತಿಸಿಕೊಂಡಿದ್ದಾರೆ. ಆಲಿಯಾ ಭಟ್, ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ನಟನೆಯ ‘ಡಾರ್ಲಿಂಗ್ಸ್’ ಸಿನಿಮಾ ಜನಮನ ಗೆದ್ದಿದೆ. ಈಗ ಜಸ್ಮೀತ್ ಕೆ. ರೀನ್ ಅವರು ಮಧುಬಾಲಾ ಜೀವನಾಧಾರಿತ ಸಿನಿಮಾಗೆ ನಿರ್ದೇಶನ ಮಾಡುವ ಅವಕಾಶ ಪಡೆದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಎಗ್ಸೈಟಿಂಗ್ ಸುದ್ದಿ.. ನಮ್ಮ ಮುಂದಿನ ಚಿತ್ರವು ಲೆಜೆಂಡರಿ ನಟಿ ಮಧುಬಾಲಾ ಅವರಿಗೆ ಗೌರವ ಸಮರ್ಪಿಸುತ್ತದೆ. ಹಿಂದಿ ಚಿತ್ರರಂಗದ ಪ್ರಮುಖ ತಾರೆಯರಲ್ಲಿ ಒಬ್ಬರಾದ ಮಧುಬಾಲಾ ಅವರ ಆಕರ್ಷಕ ಕಥೆಯನ್ನು ತಿಳಿಯಲು ಸಿದ್ಧರಾಗಿ. ಈ ಸಿನಿಮಾ ಕುರಿತ ಅಪ್ಡೇಟ್ಸ್ಗಾಗಿ ಕಾಯಿರಿ’ ಎಂದು ನಿರ್ಮಾಣ ಸಂಸ್ಥೆಯು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
View this post on Instagram
ಮಧುಬಾಲಾ ಅವರ ಬಯೋಪಿಕ್ ಎಂದಾಗ ಅಭಿಮಾನಿಗಳಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿರುತ್ತದೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದಲ್ಲಿ ಪ್ರಮುಖ ತಾರೆಯಾಗಿ ಮಿಂಚಿದ ಮಧುಬಾಲಾ ಅವರ ಬದುಕು ನಂತರದ ದಿನಗಳಲ್ಲಿ ಕಷ್ಟಕ್ಕೆ ನೂಕಲ್ಪಟ್ಟಿತು. ಅನಾರೋಗ್ಯದಿಂದ ಅವರು ಹಾಸಿಗೆ ಹಿಡಿದರು. 36ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ಮರಣವು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತು.
ಇದನ್ನೂ ಓದಿ: ಬೀದಿಗೆ ಬಿದ್ದ ಖ್ಯಾತ ಬಾಲಿವುಡ್ ನಟಿಯ ಸಹೋದರಿ; ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲು ಕೂಡ ಹಣವಿಲ್ಲ!
ಸಿನಿಮಾ ಮಾತ್ರವಲ್ಲದೇ ಮಧುಬಾಲಾ ಅವರ ಖಾಸಗಿ ಜೀವನ ಕೂಡ ಆಗಾಗ ಸುದ್ದಿ ಆಗುತ್ತಿತ್ತು. ನಟ ದಿಲೀಪ್ ಕುಮಾರ್ ಜೊತೆ ಅವರು ಹೊಂದಿದ್ದ ನಂಟಿನ ವಿಚಾರ ಕೂಡ ಬಹಿರಂಗ ಆಗಿತ್ತು. ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕವೂ ಮಧುಬಾಲಾ ಜನಮನ ಗೆದ್ದಿದ್ದರು. ಈ ನಟಿಯ ಜೀವನಾಧಾರಿತ ಸಿನಿಮಾದಲ್ಲಿ ಯಾರು ಮುಖ್ಯ ಪಾತ್ರ ಮಾಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.