ಚಿತ್ರರಂಗದಲ್ಲಿ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರ ಕೊಡುಗೆ ಅಪಾರ. 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 1980ರ ದಶಕದಿಂದ ಇಂದಿನವರೆಗೂ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಡ್ಯಾನ್ಸ್ ಕಂಡು ಬೆರಗಾಗದವರೇ ಇಲ್ಲ. ಇಂದು (ಮೇ 15) ಮಾಧುರಿ ದೀಕ್ಷಿತ್ ಅವರಿಗೆ ಜನ್ಮದಿನದ (Madhuri Dixit Birthday) ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿದ್ದರೂ, ವಯಸ್ಸು 55 ಆಗಿದ್ದರೂ ಮಾಧುರಿ ದೀಕ್ಷಿತ್ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಪ್ರತಿ ಚಿತ್ರಕ್ಕೆ ಉತ್ತಮ ಸಂಭಾವನೆ ಪಡೆಯುವ ಅವರು ಶ್ರೀಮಂತ ನಟಿ ಕೂಡ ಹೌದು. ಅವರ ಒಟ್ಟು ಆಸ್ತಿ ಮೌಲ್ಯ (Madhuri Dixit Net Worth) 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರತಿ ಚಿತ್ರಕ್ಕೆ ಅವರು 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಿಯಾಲಿಟಿ ಶೋ ಜಡ್ಜ್ ಆಗಲು ಪ್ರತಿ ಸೀಸನ್ಗೆ 25 ಕೋಟಿ ರೂಪಾಯಿ ಹಾಗೂ ಒಂದು ಜಾಹೀರಾತಿನಲ್ಲಿ ನಟಿಸಲು 8 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಮಾಧುರಿ ದೀಕ್ಷಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ರಿಯಾಲಿಟಿ ಶೋಗಳ ಜಡ್ಜ್ ಆಗಿ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಒಟಿಟಿ ಪ್ಲಾಟ್ಫಾರ್ಮ್ನಲ್ಲೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹೊಸ ಹೊಸ ವೆಬ್ಸಿರೀಸ್ ಮತ್ತು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಇದು ಒಟಿಟಿ ಜಮಾನಾ. ಅನೇಕ ನಟ-ನಟಿಯರ ರೀತಿಯಲ್ಲಿ ಮಾಧುರಿ ದೀಕ್ಷಿತ್ ಕೂಡ ವೆಬ್ ಸರಣಿಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ದಿ ಫೇಮ್ ಗೇಮ್’ ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಅವರು ಒಟಿಟಿ ಜಗತ್ತಿಗೆ ಕಾಲಿಟ್ಟರು. ಅದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಆಯಿತು. ಆ ಬಳಿಕ ಅವರಿಗೆ ಬೇರೆ ಬೇರೆ ಒಟಿಟಿ ಸಂಸ್ಥೆಗಳಿಂದ ಆಫರ್ ಬರುತ್ತಿವೆ. ಈಗ ಅವರು ‘ಅಮೇಜಾನ್ ಪ್ರೈಂ ವಿಡಿಯೋ’ ನಿರ್ಮಾಣದ ‘ಮಜಾ ಮಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಲಿಂಗಕಾಮಿ ಪಾತ್ರಕ್ಕೆ ಓಕೆ ಎಂದ ಮಾಧುರಿ ದೀಕ್ಷಿತ್?
‘ಮಜಾ ಮಾ’ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಅವರು ಸಲಿಂಗಕಾಮಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ‘ಪ್ರೇಕ್ಷಕರು ಈಗಾಗಲೇ ಊಹಿಸಿರುವಂತೆ ‘ಮಜಾ ಮಾ’ ಒಂದು ಮಾಮೂಲಿ ಫ್ಯಾಮಿಲಿ ಡ್ರಾಮಾ ಅಲ್ಲ. ಇದರಲ್ಲಿ ಮಾಧರಿ ದೀಕ್ಷಿತ್ ಅವರು ಸಲಿಂಗಕಾಮಿಯ ಪಾತ್ರ ಮಾಡಲಿದ್ದಾರೆ. ಆ ಪಾತ್ರದ ಲೈಂಗಿಕ ಆಸಕ್ತಿಯಿಂದಾಗಿ ಕಥೆಯಲ್ಲಿ ಟ್ವಿಸ್ಟ್ಗಳು ಎದುರಾಗುತ್ತವೆ. ಇದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ’ ಅಂತ ಮೂಲಗಳು ತಿಳಿಸಿವೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
ಈ ಸಿನಿಮಾದಲ್ಲಿ ಮಾಧರಿ ದೀಕ್ಷಿತ್ ಜೊತೆ ಗಜರಾಜ್ ರಾವ್, ರಜತ್ ಕಪೂರ್, ಬರ್ಖಾ ಸಿಂಗ್ ಮುಂತಾದವರು ನಟಿಸುತ್ತಿದ್ದಾರೆ. ಆನಂದ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಮಾಧುರಿ ದೀಕ್ಷಿತ್ ಅವರು ನಿಭಾಯಿಸುತ್ತಿರುವ ಪಾತ್ರ ತುಂಬ ಸೂಕ್ಷ್ಮವಾಗಿದೆ. ಅದನ್ನು ಸೂಕ್ತ ರೀತಿಯಲ್ಲಿ ತೆರೆಮೇಲೆ ಕಟ್ಟಿಕೊಡಬೇಕು. ಇಲ್ಲದಿದ್ದರೆ ಪ್ರೇಕ್ಷಕರಿಂದ ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಆ ವಿಚಾರದಲ್ಲಿ ನಿರ್ದೇಶಕರು ಸಂಪೂರ್ಣ ಭರವಸೆ ನೀಡಿದ್ದರಿಂದ ಮಾಧುರಿ ದೀಕ್ಷಿತ್ ಅವರ ಸಲಿಂಗಕಾಮಿ ಮಹಿಳೆಯ ಮಾತ್ರ ಮಾಡಲು ಒಪ್ಪಿಕೊಂಡರು ಎನ್ನಲಾಗಿದೆ. ಮಾಧುರಿ ದೀಕ್ಷಿತ್
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:29 am, Sun, 15 May 22