
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam) ಉಗ್ರರು ನಡೆಸಿದ ದಾಳಿಯಲ್ಲಿ 26 ಜನರು ಮೃತರಾಗಿದ್ದು, ಘಟನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷ ಎಂದರೆ, ಪಾಕಿಸ್ತಾನದ ನಟಿ ಮಹಿರಾ ಖಾನ್ (Mahira Khan) ಸಹ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಅವರು ಡಿಲೀಟ್ ಮಾಡಿದ್ದಾರೆ!
ಮಹಿರಾ ಖಾನ್ ಅವರು ಪಾಕಿಸ್ತಾನದ ನಟಿ. ಆದರೆ ಅವರಿಗೆ ಭಾರತೀಯ ಚಿತ್ರರಂಗದ ಜೊತೆ ನಂಟು ಇದೆ. ಬಾಲಿವುಡ್ನಲ್ಲಿ ಅವರು ಸಿನಿಮಾ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ರಯೀಸ್’ ಸಿನಿಮಾಗೆ ಮಹಿರಾ ಖಾನ್ ಅವರು ನಾಯಕಿ ಆಗಿದ್ದರು. ಈಗ ಅವರು ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ಬಗ್ಗೆ ಚರ್ಚೆ ಆಗುತ್ತಿದೆ.
‘ಪ್ರಪಂಚದ ಯಾವುದೇ ಭಾಗದಲ್ಲಿ, ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಸುವುದು ಹೇಡಿತನ. ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ತೊಂದರೆಗೆ ಒಳಗಾದ ಎಲ್ಲರಿಗೂ ನನ್ನ ಸಂತಾಪಗಳು’ ಎಂದು ಮಹಿರಾ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದರು. ಆದರೆ ಬಳಿಕ ಅವರು ಅದನ್ನು ಡಿಲೀಟ್ ಮಾಡಿದ್ದಾರೆ. ಪಾಕ್ ನಟಿಯ ಈ ನಡೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಮತ್ತೋರ್ವ ಪಾಕ್ ನಟ ಫವಾದ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಪಹಲ್ಗಾಮ್ನಲ್ಲಿ ನಡೆದ ಹೀನ ದಾಳಿಯ ಬಗ್ಗೆ ತಿಳಿದು ನೋವಾಯಿತು. ಭಯಾನಕ ಘಟನೆಯ ಸಂತ್ರಸ್ತರಾದ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಗಳಿಗೆ ಈ ಕಷ್ಟದ ಸಂದರ್ಭದಲ್ಲಿ ನೋವು ಸಹಿಸುವ ಶಕ್ತಿ ಬರಲಿ’ ಎಂದು ಫಹಾದ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಎನ್ನುವ ಸ್ವರ್ಗದಲ್ಲಿ ತೇಲಾಡುವಾಗ ಕಣ್ಣೆದುರೇ ಗಂಡನನ್ನ ಕೊಂದ ಉಗ್ರರ ಭೀಕರತೆ ಬಿಚ್ಚಿಟ್ಟ ಪತ್ನಿ
ಫವಾದ್ ಖಾನ್ ಅವರು ಬಾಲಿವುಡ್ನ ‘ಅಬೀರ್ ಗುಲಾಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಪಹಲ್ಗಾಮ್ ಘಟನೆ ಬಳಿಕ ಈ ಸಿನಿಮಾವನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಪಾಕ್ ನಟನಿಗೆ ಅವಕಾಶ ನೀಡಿದ್ದಕ್ಕಾಗಿ ‘ಅಬೀರ್ ಗುಲಾಲ್’ ಚಿತ್ರತಂಡದ ವಿರುದ್ಧ ಟೀಕೆ ಕೇಳಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.