ನಟಿ ಮಲ್ಲಿಕಾ ಶೆರಾವತ್ (Mallika Sherawat) ಅವರು ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಅವರು ನಂತರ ತೆರೆಮರೆಗೆ ಸರಿದರು. ಆ ರೀತಿ ಆಗಿದ್ದಕ್ಕೆ ಕಾರಣ ಏನು ಎಂದು ಅವರು ಈಗ ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್ ಕೌಚ್ (Casting Couch) ಪಿಡುಗಿನ ಬಗ್ಗೆ ಈಗಾಗಲೇ ಅನೇಕ ನಟಿಯರು ಮಾತನಾಡಿದ್ದಾರೆ. ಮಲ್ಲಿಕಾ ಶೆರಾವತ್ ಅವರು ಇನ್ನಷ್ಟು ವಿವರಗಳನ್ನು ತೆರೆದಿಟ್ಟಿದ್ದಾರೆ. ಬಾಲಿವುಡ್ನ (Bollywood) ಟಾಪ್ ಹೀರೋಗಳ ಮೇಲೆ ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಯಾರ ಹೆಸರನ್ನೂ ಅವರು ಪ್ರತ್ಯೇಕವಾಗಿ ಹೇಳಿಲ್ಲ. ಮಲ್ಲಿಕಾ ಶೆರಾವತ್ ನೀಡಿದ ಬೋಲ್ಡ್ ಹೇಳಿಕೆಯಿಂದಾಗಿ ಹೊಸ ಚರ್ಚೆ ಶುರುವಾಗಿದೆ. ಹಿಂದಿ ಚಿತ್ರರಂಗದ ಕರಾಳ ಮುಖವನ್ನು ಅವರು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಬಣ್ಣದ ಲೋಕಕ್ಕೆ ಕಾಲಿಡುವಾಗಲೇ ಮಲ್ಲಿಕಾ ಶೆರಾವತ್ ಅವರು ಬೋಲ್ಡ್ ಪಾತ್ರಗಳನ್ನು ಮಾಡಿದ್ದರು. ಹಾಗೆಂದ ಮಾತ್ರಕ್ಕೆ ಅವರು ಎಲ್ಲ ವಿಚಾರದಲ್ಲೂ ರಾಜಿ ಆಗುತ್ತಾರೆ ಎಂದರ್ಥವಲ್ಲ. ‘ಟಾಪ್ ಹೀರೋಗಳು ನನ್ನ ಜೊತೆ ಸಿನಿಮಾ ಮಾಡಲು ನಿರಾಕರಿಸಿದರು. ಯಾಕೆಂದರೆ ನಾನು ಅವರೊಂದಿಗೆ ರಾಜಿ ಆಗಲಿಲ್ಲ’ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
‘ಯಾವ ನಟಿಯನ್ನು ತಾವು ಕಂಟ್ರೋಲ್ ಮಾಡಬಹುದು, ಯಾವ ನಟಿ ತಮ್ಮೊಂದಿಗೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ಹೀರೋಗಳು ಇಷ್ಟಪಡುತ್ತಾರೆ. ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ’ ಎಂದಿದ್ದಾರೆ ಮಲ್ಲಿಕಾ ಶೆರಾವತ್.
‘ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ಆತನ ಜೊತೆ ನೀವು ಸಿನಿಮಾ ಮಾಡುತ್ತಿರುತ್ತೀರಿ. ಅವರದೇ ಸರ್ಕಲ್ನಲ್ಲಿ ಇರುತ್ತೀರಿ. ಅವರ ಮಧ್ಯರಾತ್ರಿ ಕರೆದಾಗ ನೀವು ಹೋಗದಿದ್ದರೆ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ’ ಎಂದು ಮಲ್ಲಿಕಾ ಶೆರಾವತ್ ಹೇಳಿರುವುದು ಸೆನ್ಸೇಷನ್ ಸೃಷ್ಟಿ ಮಾಡಿದೆ.
2002ರಲ್ಲಿ ಮಲ್ಲಿಕಾ ಶೆರಾವತ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 2004ರ ‘ಮರ್ಡರ್’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು.
Published On - 8:24 am, Tue, 2 August 22