
ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಈಗಾಗಲೇ ಜೀವ ಬೆದರಿಕೆ ಇದೆ. ಹಾಗಾಗಿ ಅವರ ಮನೆಗೆ ಭದ್ರತೆ ನೀಡಲಾಗಿದೆ. ಆದರೂ ಕೂಡ ಭದ್ರತಾ ಲೋಪ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಒಳಗೆ ನುಗ್ಗಿದ್ದಾನೆ. ಕೂಡಲೇ ಆತನನ್ನು ಬಂಧಿಸಲಾಗಿದೆ. ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅಪಾರ್ಟ್ಮೆಂಟ್ಗೆ ನುಗ್ಗಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಸದ್ಯಕ್ಕೆ ಬಾಂದ್ರಾ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆ ಬಳಿಕ ಸಲ್ಮಾನ್ ಖಾನ್ ಮನೆ ಬಳಿ ಭದ್ರತೆ ಹೆಚ್ಚಿಸಲಾಗಿದೆ.
ಈ ಘಟನೆ ನಡೆದಿರುವುದು ಮೇ 20ರ ಸಂಜೆ 7.15ರ ಸುಮಾರಿಗೆ. ಸಲ್ಮಾನ್ ಖಾನ್ ಅವರ ಅಪಾರ್ಟ್ಮೆಂಟ್ಗೆ ನುಗ್ಗಿರುವ ವ್ಯಕ್ತಿಯನ್ನು 23 ವರ್ಷದ ಜಿತೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಛತ್ತಿಸ್ಗಡ ಮೂಲದವನು. ಆತನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆತ ಈ ರೀತಿ ನಡೆದುಕೊಂಡಿದ್ದರ ಹಿಂದೆ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಈ ಮೊದಲು ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಆ ಘಟನೆ ನಡೆದ ನಂತರ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಯಿತು. ಇಷ್ಟೆಲ್ಲ ಸೆಕ್ಯುರಿಟಿ ನೀಡಲಾಗಿದ್ದರೂ ಕೂಡ ಅಪರಿಚಿತ ವ್ಯಕ್ತಿಯು ಗ್ಯಾಲಕ್ಸಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ್ದಾನೆ. ಇದರಿಂದ ಭದ್ರತಾ ಲೋಪ ಆಗಿರುವುದು ಸ್ಪಷ್ಟವಾಗಿದೆ.
ಈ ಸುದ್ದಿ ಕೇಳಿದ ಬಳಿಕ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಆದ್ದರಿಂದ ಸಲ್ಮಾನ್ ಖಾನ್ ಅವರು ಯಾವಾಗಲೂ ಜೀವ ಭಯದಲ್ಲೇ ಇರುವಂತಾಗಿದೆ. ಅದರ ನಡುವೆ ಕೆಲವರು ಮನೆಗೆ ನುಗ್ಗಲು ಯತ್ನಿಸಿರುವುದರಿಂದ ಅನುಮಾನ ಹೆಚ್ಚಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ಸಲ್ಮಾನ್ ಖಾನ್ ಮೌನ; ಕದನ ವಿರಾಮಕ್ಕೆ ಖುಷಿ: ಜಾಡಿಸಿದ ನೆಟ್ಟಿಗರು
ಇದಲ್ಲದೇ ಮಹಿಳೆಯೊಬ್ಬರು ಕೂಡ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಮೆಂಟ್ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆಕೆಯನ್ನು ಕೂಡ ಬಂಧಿಸಲಾಗಿದೆ. ಈ ಬಗ್ಗೆ ಎಎನ್ಐ ವರದಿ ಮಾಡಿದೆ. ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Thu, 22 May 25